ಮೆಸ್ಕಾಂನಿಂದ ಗ್ರಾಹಕರಿಗೆ ಅನಿಯಮಿತ ಬಿಲ್: ಸ್ಪಷ್ಟನೆ ನೀಡುವಂತೆ ತಾ.ಪಂ. ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ಒತ್ತಾಯ

Update: 2019-10-31 18:05 GMT

ಬೆಳ್ತಂಗಡಿ: ಮೆಸ್ಕಾಂ ಮೀಟರ್ ಸಿಬಂದಿ ನಿರ್ಲಕ್ಷ್ಯದಿಂದಾಗಿ ಬೆಳ್ತಂಗಡಿ ತಾಲೂಕಿನ ನಾಳ, ನ್ಯಾತರ್ಪು, ಓಡಿಲ್ನಾಳ ಸೇರಿದಂತೆ ಹಲವೆಡೆ ಏಕಾಏಕಿ ಸಾವಿರಾರು ವಿದ್ಯುತ್ ಬಿಲ್ ನೀಡಿರುವ ಕುರಿತು ಮೆಸ್ಕಾಂ ಅಧಿಕಾರಿಗಳು ಸ್ಪಷ್ಟನೆ ನೀಡಿ ಗ್ರಾಹಕರಿಗೆ ಸೂಕ್ತ ಸ್ಪಂದನೆ ನೀಡಬೇಕು ಎಂದು ತಾ.ಪಂ. ಸಾಮಾನ್ಯ ಸಬೆಯಲ್ಲಿ ಒತ್ತಾಯಿಸಲಾಯಿತು. 

ಗುರುವಾರ ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ ಅಧ್ಯಕ್ಷತೆಯಲ್ಲಿ ಜರಗಿದ ತಾ.ಪಂ. ಸಾಮಾನ್ಯ ಸಭೆಯಲ್ಲಿ ಕೆಲ ಕಾಲ ಚರ್ಚೆಗೆ ಕಾರಣವಾಯಿತು.
ಮೆಸ್ಕಾಂ ಮೀಟರ್ ರೀಡಿಂಗ್ ಸಿಬಂದಿ ನಿರ್ಲಕ್ಷ್ಯದಿಂದ ಗ್ರಾಹಕರಿಗೆ ಒಂದೇ ಸಮನೆ 10ರಿಂದ 30 ಸಾವಿರ ಬಿಲ್ ನೀಡಿದ್ದೀರಿ. ಈ ಕುರಿತು ನಮಗೆ ಸ್ಪಷ್ಟನೆ ಬೇಕು. ಇಷ್ಟು ದಿನ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ತಾ.ಪಂ. ಸದಸ್ಯ ಗೋಪಿನಾಥ್ ನಾಯಕ್ ಪ್ರಶ್ನಿಸಿದರು.  

ಪ್ರತಿಕ್ರಿಯಿಸಿದ ಮೆಸ್ಕಾಂ ಎಇಇ ಶಿವಶಂಕರ್, ಮೀಟರ್ ರೀಡಿಂಗ್ ಮಾಡದೆ ನಿಗದಿತ ಬಿಲ್ ನೀಡಿದ್ದರಿಂದ ಗ್ರಾಹಕರಿಗೆ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಕೂಡಲೆ ಸಿಬಂದಿಯನ್ನು ವಜಾ ಮಾಡಲಾಗಿದೆ. ಆದರೆ ಗ್ರಾಹಕರು ಹೆಚ್ಚು ಬಿಲ್ ಬಂದ ಕುರಿತು ಮಾಹಿತಿ ನೀಡಿದಂತೆ ಕಡಿಮೆ ಬಿಲ್ ಬಂದಾಗ ಪರಿಶೀಲಿಸಿದ್ದರೆ ಸಮಸ್ಯೆ ಯಾಗುತ್ತಿರಲಿಲ್ಲ ಎಂದು ಹೇಳಿದರು. ಇದಕ್ಕೆ ಸದಸ್ಯರಾದ ವಿಜಯ ಗೌಡ ಹಾಗೂ ಶಶಿಧರ್ ಕಲ್ಮಂಜ ಆಕ್ಷೇಪ ವ್ಯಕ್ತಪಡಿಸಿದರು. ತಾ.ಪಂ. ಇ.ಒ. ಜಯರಾಂ ಪ್ರವೇಶಿಸಿ, ಗ್ರಾಹಕರಿಗೆ ಮನವರಿಕೆ ಮಾಡಿ ಬಿಲ್ ಪಾವತಿಗೆ ಹೊರೆಯಾಗದಂತೆ ಸಮಸ್ಯೆ ಈ ಕೂಡಲೆ ಬಗೆಹರಿಸುವಂತೆ ಅಧಿಕಾರಿಗೆ ಸೂಚಿಸಿದರು.

ಸರಕಾರಕ್ಕೆ ಆದಾಯ ತರುವ ಎಂಎಸ್‍ಐಎಲ್ ತಾಲೂಕಲ್ಲಿ ಪರವಾನಗಿ ನೀಡುತ್ತಿಲ್ಲ. ಆದರೆ ಎಗ್ಗಿಲ್ಲದೆ ಆಕ್ರಮವಾಗಿ ಮದ್ಯ ಮಾರಾಟ ನಡೆದರೂ ಅಬಕಾರಿ ಇಲಾಖೆ ಕಂಡರೂ ಕಾಣದಂತಿದೆ ಎಂದು ಸದಸ್ಯ ಜೋಯೆಲ್ ಮೆಂಡೋನ್ಸಾ ಸಭೆಯ ಗಮನ ಸೆಳೆದರು. ಅಬಕಾರಿ ಇಲಾಖೆ ನಿರೀಕ್ಷಕಿ ಸೌಮ್ಯಲತಾ ಪ್ರತಿಕ್ರಿಯಿಸಿ, ಜಿಲ್ಲೆಯಿಂದ ಪರವಾನಿಗೆ ನೀಡಿರುವ ಕುರಿತು ನಮಗೆ ಸ್ಪಷ್ಟ ಮಾಹಿತಿ ಇಲ್ಲ. ತಾಲೂಕಲ್ಲಿ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿಲ್ಲ ಎಂದು ಪ್ರತಿಕ್ರಯಿಸಿದರು.

ವೈನ್ ಶಾಪ್‍ಗಳಲ್ಲಿ ದರ ಪಟ್ಟಿ
ತಾಲೂಕಿನ ವೈನ್ ಶಾಪ್‍ಗಳಲ್ಲಿ ಕಡ್ಡಾಯ ದರ ಪಟ್ಟಿ ನಿಗದಿ ಪಡಿಸಬೇಕೆಂಬ ಕಾನೂನು ಪಾಲನೆಯಾಗುತ್ತಿಲ್ಲ. ಈ ವಿರುದ್ಧ ಎಷ್ಟು ದೂರು ದಾಖಲಿಸಿದ್ದೀರಿ ಎಂದು ಸದಸ್ಯ ಲಕ್ಷ್ಮೀನಾರಾಯಣ ಪ್ರಶ್ನಿಸಿದರು. ಸದಸ್ಯ ಶಶಿಧರ್, ವಿಜಯ ಗೌಡ ಧ್ವನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಇ.ಒ.ಜಯರಾಂ, ಅಬಕಾರಿ ಇಲಾಖೆಯಿಂದ ಸಾಮಾಜಿಕ ಜಾಲತಾಣ ರಚಿಸಿ, ದೂರು ಸಾರ್ವಜನಿಕರಿಂದ ದೂರು ಸ್ವೀಕರಿಸುವಂತಾಗಬೇಕು ಎಂದು ಖಡಕ್ ಸೂಚನೆ ನೀಡಿದರು. 

ನೆರೆ ಸಂತ್ರಸ್ತರಿಗೆ ಗರಿಷ್ಠ ಪರಿಹಾರ
ನೆರೆಯಿಂದ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಕೆಲವೊಂದು ಕುಟುಂಬ ವಂಚಿತವಾಗಿದೆ. ತಾಂತ್ರಿಕ ತೊಂದರೆ ಇರುವ ಕುರಿತು ಸ್ಪಷ್ಟನೆ ಬೇಕಾಗಿದೆ. ಮಿತ್ತಬಾಗಿಲು ಕುಕ್ಕಾವು ಸಮೀಫ ತೋಡುಗಳಲ್ಲಿ ಹೂಳು ತುಂಬಿದ್ದು,  ತೆರವಿಗೆ ಕ್ರಮ ವಹಿಸುವಂತೆ ಸದಸ್ಯ ಜೋಯೆಲ್ ವಿನಂತಿಸಿದರು.

ತಹಶೀಲ್ದಾರ್ ಗಣಪತಿ ಶಾಸ್ತೀ ಪ್ರತಿಕ್ರಿಯಿಸಿ ತಾಲೂಕಲ್ಲಿ 234 ಮಂದಿಗೆ 5 ಲಕ್ಷದಂತೆ ಸರಕಾರದಿಂದ ಪರಿಹಾರ ಲಭ್ಯವಾಗಲಿದೆ. ಮತ್ತೆ 48 ಹಾನಿಕುರಿತಾದ ಅರ್ಜಿ ಬಂದಿದ್ದು, ಎನ್‍ಡಿಆರ್‍ಎಫ್ ಗೈಡ್ ಲೈನ್ ಪ್ರಕಾರ ಗರಿಷ್ಠ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲೂ ಬ್ಯಾಂಕ್ ಖಾತೆ ಹಾಗೂ ಲೋನ್ ಖಾತೆ ನೀಡಿರುವುದರಿಂದ 16 ಅರ್ಜಿದಾರರಿಗೆ ಪರಿಹಾರ ವಿಳಂಬವಾಗಿದೆ ಎಂದು ತಿಳಿಸಿದರು.
ತಾ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಟಿ.ಸೆಬಾಸ್ಟಿನ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News