×
Ad

ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್ ಟ್ರೋಫಿ ಅನಾವರಣಗೊಳಿಸಿದ ಕರೀನಾ ಕಪೂರ್

Update: 2019-11-01 15:13 IST

ಹೊಸದಿಲ್ಲಿ, ನ.1: ಬಾಲಿವುಡ್ ನಟಿ ಕರೀನಾ ಕಪೂರ್ ಮೆಲ್ಬೋರ್ನ್‌ನಲ್ಲಿ ಶುಕ್ರವಾರ ಐಸಿಸಿ ಮಹಿಳಾ ಟ್ವೆಂಟಿ-20 ವಿಶ್ವಕಪ್‌ನ್ನು ಅನಾವರಣಗೊಳಿಸಿದರು.

ಮಹಿಳಾ ಟ್ವೆಂಟಿ-20 ವಿಶ್ವಕಪ್ 2020ರ ಫೆಬ್ರವರಿ 21ರಂದು ಆರಂಭವಾಗಲಿದೆ.

ಬಾಂಗ್ಲಾದೇಶ, ಸ್ಕಾಟ್ಲೆಂಡ್‌ನಲ್ಲಿ ಅರ್ಹತಾ ಟೂರ್ನಿಯನ್ನು ಜಯಿಸುವುದರೊಂದಿಗೆ ಮುಂಬರುವ ವಿಶ್ವಕಪ್‌ನಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಎ ಗುಂಪಿನಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯ, ಭಾರತ, ನ್ಯೂಝಿಲ್ಯಾಂಡ್ ಹಾಗೂ ಶ್ರೀಲಂಕಾ ತಂಡಗಳಿವೆ. 12 ವರ್ಷಗಳ ಹಿಂದೆ ಮೊದಲ ಮಹಿಳಾ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಿದ್ದ ಥಾಯ್ಲೆಂಡ್ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವುದರೊಂದಿಗೆ ಇತಿಹಾಸ ನಿರ್ಮಿಸಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್ ಹಾಗೂ ಪಾಕಿಸ್ತಾನದೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

2018ರಲ್ಲಿ ವೆಸ್ಟ್‌ಇಂಡೀಸ್‌ನಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಗ್ರ-8 ತಂಡಗಳು ಟೂರ್ನಿಯಲ್ಲಿ ನೇರವಾಗಿ ಅರ್ಹತೆ ಪಡೆದಿವೆ.

ಭಾರತ ತಂಡ ಫೆ.21ರಂದು ಚಾಂಪಿಯನ್ ಆಸ್ಟ್ರೇಲಿಯವನ್ನು ಎದುರಿಸುವ ಮೂಲಕ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.

ಟೂರ್ನಿಯ ಫೈನಲ್ ಪಂದ್ಯ ಅಂತರ್‌ರಾಷ್ಟ್ರೀಯ ಮಹಿಳಾ ದಿನವಾದ ಮಾ.8ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನ(ಎಂಸಿಸಿ)ದಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News