ತುಂಬೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ
ಬಂಟ್ವಾಳ, ನ. 1: ಕನ್ನಡ ನಾಡು ಸಂಗೀತ, ಸಾಹಿತ್ಯ ಶಿಲ್ಪಕಲೆ, ಸಂಸ್ಕೃತಿಗಳ ತವರೂರು. ಇದನ್ನು ಉಳಿಸಿ ಬೆಳೆಸುವ ಕರ್ತವ್ಯ ಮುಂದುವರಿಯಬೇಕು ಎಂದು ತುಂಬೆ ಪ್ರೌಢಶಾಲಾ ಕನ್ನಡ ಶಿಕ್ಷಕಿ ಮಲ್ಲಿಕಾ ಶೆಟ್ಟಿ ಹೇಳಿದ್ದಾರೆ.
ಅವರು ತುಂಬೆ ಕಾಲೇಜಿನಲ್ಲಿ ಏರ್ಪಡಿಸಿದ್ದ 64ನೇ ಕನ್ನಡ ರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಕೆ. ಎನ್. ಗಂಗಾಧರ ಆಳ್ವ ಮಾತನಾಡಿ, ಕನ್ನಡ ಎನ್ನುವುದು ನಮ್ಮ ಮಾತೃಭಾಷೆ. ಉಳಿದ ಭಾಷೆಗಳು ನಮಗೆ ಬಂಧುಗಳು ಇದ್ದಂತೆ. ತಾಯಿಯಾದವಳ ಋಣ ಅತ್ಯಂತ ಪ್ರಮುಖ. ಆಕೆಯನ್ನು ಮರೆಯಲು ಸಾಧ್ಯವೇ ಇಲ್ಲ. ಸ್ವತ: ಆದರ್ಶವನ್ನು ಪಾಲಿಸಿ ಕರ್ತವ್ಯವನ್ನು ಮಾಡುತ್ತ ಹೋದಲ್ಲಿ ಕನ್ನಡ ಭಾಷೆ, ನೆಲ, ಜಲವನ್ನು ಉಳಿಸಿಕೊಳ್ಳುವುದನ್ನು ಆಲೋಚಿಸಬಹುದು ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಊರಿನ ಪ್ರಮುಖ, ಸಾಮಾಜಿಕ ಸೇವಾ ಕರ್ತೃ ಜಯರಾಮ ಸಾಮಾನಿ ಅವರಿಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. ತುಂಬೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಶ್ರೀನಿವಾಸ ಕೆದಿಲ ಉಪಸ್ಥಿತರಿದ್ದರು. ಉಪನ್ಯಾಸಕ ವಿ. ಸುಬ್ರಹ್ಮಣ್ಯ ಭಟ್ ಸ್ವಾಗತಿಸಿ, ಕನ್ನಡ ಉಪನ್ಯಾಸಕ ಅಬ್ದುಲ್ ರಹಿಮಾನ್ ಡಿ. ಬಿ. ವಂದಿಸಿದರು.