ಮಳೆಯಿಂದ ಹಾನಿಗೊಳಗಾದ ಮೀನುಗಾರರಿಗೂ ಪರಿಹಾರ: ಬೊಮ್ಮಾಯಿ
ಉಡುಪಿ, ನ.1: ಇತ್ತೀಚಿನ ಭಾರೀ ಮಳೆಯಿಂದ ಬಾಧಿತರಾದ ಕರಾವಳಿಯ ಮೀನುಗಾರರಿಗೂ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ತನ್ನ ಒಪ್ಪಿಗೆಯನ್ನು ನೀಡಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿ ಗಳು ಈ ಬಗ್ಗೆ ಘೋಷಣೆಯನ್ನು ಮಾಡಲಿದ್ದಾರೆ ಎಂದು ರಾಜ್ಯ ಗೃಹ ಹಾಗೂ ಸಹಕಾರ ಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಕನ್ನಡ ರಾಜ್ಯೋತ್ಸವ ದಲ್ಲಿ ಧ್ವಜಾರೋಹಣ ನೆರವೇರಿಸಿ, ಪಥಸಂಚಲನದಲ್ಲಿ ಗೌರವ ರಕ್ಷೆ ಸ್ವೀಕರಿಸಿ, ಕನ್ನಡ ರಾಜ್ಯೋತ್ಸವ ಸಂದೇಶ ನೀಡಿ ಮಾತನಾಡುತಿದ್ದರು.
ರಾಜ್ಯದಲ್ಲೀಗ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಜನಪರ ಸರಕಾರ ಆಡಳಿತದಲ್ಲಿದೆ. ರಾಜ್ಯದಲ್ಲಿ ಈಚೆಗೆ ಸಂಭವಿಸಿದ ಭೀಕರ ಪ್ರವಾಹದ ಸವಾಲನ್ನು ಸರಕಾರ ಸಮರ್ಥವಾಗಿ ನಿಭಾಯಿಸಿದೆ. ಈ ಬಾರಿಯ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸತ್ತ 10 ಮಂದಿಯ ಕುಟುಂಬ ಗಳಿಗೆ ತಲಾ ಐದು ಲಕ್ಷ ರೂ. ಗಳಂತೆ ಒಟ್ಟು 50 ಲಕ್ಷ ರೂ.ಗಳ ಪರಿಹಾರವನ್ನು ವಿತರಿಸಲಾಗಿದೆ.
ಮಳೆಯಿಂದ ಸಂಪೂರ್ಣ ಹಾನಿಗೊಳಗಾದ ಮನೆಗಳಿಗೆ ನೀಡುವ ಪರಿಹಾರ ವನ್ನು 95,000ರೂ.ನಿಂದ ಐದು ಲಕ್ಷ ರೂ.ಗಳಿಗೆ ಯಡಿಯೂರಪ್ಪ ಸರಕಾರ ಹೆಚ್ಚಿಸಿದೆ. ಈಗ ಎ ಮತ್ತು ಬಿ ಕೆಟಗರಿ ಮನೆಗಳಿಗೂ ತಲಾ ಐದು ಲಕ್ಷ ರೂ. ನೀಡಲಾಗುತ್ತದೆ. ಅಲ್ಲದೇ ಭಾಗಶ: ಹಾನಿಗೊಳಗಾದ ಮನೆಗಳಿಗೆ ನೀಡುವ ಪರಿಹಾರವನ್ನು 25 ಸಾವಿರ ರೂ.ನಿಂದ 50ಸಾವಿರ ರೂ.ಗೆ ಹೆಚ್ಚಿಸಲಾಗಿದೆ ಎಂದರು.
ಕರಾವಳಿ ಭಾಗದ ಜನರು ಸಾಹಸಪ್ರವೃತ್ತಿಯವರು. ಅವರ ಈ ಪ್ರವೃತ್ತಿಯನ್ನು ಬಂಡವಾಳವಾಗಿ ಪರಿವರ್ತಿಸಿ, ಈ ಭಾಗದ ಅಭಿವೃದ್ಧಿಗೆ ಪೂರಕವಾಗಿ ಬಳಸಿ ಕೊಳ್ಳುವಂತಾಗಬೇಕು. ಕರಾವಳಿ ಭಾಗದಲ್ಲಿ ಉದ್ಯೋಗ ಅವಕಾಶ ಹಾಗೂ ಹೊಸ ಉದ್ಯೋಗಗಳ ಸೃಷ್ಟಿ ಮಾಡಬೇಕಾಗಿದೆ ಎಂದರು.
ಕರಾವಳಿಯಲ್ಲಿ ಉದ್ಯಮಶೀಲತೆ ಹಾಗೂ ತಂತ್ರಜ್ಞಾನಕ್ಕೆ ಹೆಚ್ಚಿನ ಅವಕಾಶ ನೀಡಬೇಕು. ಮೀನುಗಾರಿಕೆ ಹಾಗೂ ಕೃಷಿ ಆಧಾರಿತ ಉದ್ಯಮಗಳ ಆರಂಭಕ್ಕೆ ಪ್ರೋತ್ಸಾಹಿಸಬೇಕು. ಈ ಭಾಗದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸಲು ಈಗಾಗಲೇ ಕಾರ್ಯಪಡೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ. ಕಾರ್ಯಪಡೆ ಇವುಗಳಿಗಿರುವ ಅಡೆತಡೆಗಳನ್ನು ನಿವಾರಿಸಿ, ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣ ವಾಗಿಸಲು ಬೇಕಾದ ಸಲಹೆಯನ್ನೊ ಳಗೊಂಡ ವರದಿಯನ್ನು ಎರಡು ತಿಂಗಳಲ್ಲಿ ನೀಡಲಿದೆ ಎಂದು ಬೊಮ್ಮಾಯಿ ನುಡಿದರು.
ಜಿಲ್ಲೆಯಲ್ಲಿ ಖಾಸಗಿ ಹಾಗೂ ಸರಕಾರಿ ವಲಯದಿಂದ ಟೆಂಪಲ್ ಟೂರಿಸಂ, ಕೋಸ್ಟಲ್ ಟೂರಿಸಂಗೆ ವಿಶೇಷ ಪ್ರೋತ್ಸಾಹ ನೀಡುವ ಮೂಲಕ ಉದ್ಯೋಗಾವಕಾಶವನ್ನು ಹೆಚ್ಚಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಗೃಹ ಸಚಿವ ಬೊಮ್ಮಾಯಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕನ್ನಡ ಮತ್ತು ತುಳು ಎರಡು ಭಾಷೆಗಳನ್ನು ಒಟ್ಟಾಗಿ ಬೆಳೆಸಲು ಸರ್ವ ಪ್ರಯತ್ನ ನಡೆಯಲಿದೆ ಎಂದು ಭರವಸೆ ನೀಡಿದರು.
ಸಚಿವರು ಜಿಲ್ಲೆಯ 30 ಮಂದಿ ಗಣ್ಯರಿಗೆ ಹಾಗೂ ಎರಡು ಸಂಘಸಂಸ್ಥೆಗಳಿಗೆ ಘೋಷಿಸಿದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ವಿತರಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ ಮೂರು ಆಕರ್ಷಕ ಟ್ಯಾಬ್ಲೋಗಳಿಗೆ ಹಾಗೂ ಪಥಸಂಚಲನದಲ್ಲಿ ಭಾಗವಹಿಸಿದ ಮೂರು ಅತ್ಯುತ್ತಮ ತಂಡಗಳಿಗೆ ಬಹುಮಾನಗಳನ್ನು ವಿತರಿಸಿದರು.
ಕೊನೆಯಲ್ಲಿ ನಗರದ ಶಾಲಾ ವಿದ್ಯಾರ್ಥಿಗಳಿಂದ ಕನ್ನಡದ ನುಡಿ ಮತ್ತು ಸಂಸ್ಕೃತಿಯ ವೈಭವವನ್ನು ಸಾರುವ ಆಕರ್ಷಕ ಹಾಡು-ನೃತ್ಯಗಳನ್ನೊಳಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವರು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಸುನಿಲ್ ಕುಮಾರ್, ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ತಾಪಂ ಅಧ್ಯಕ್ಷೆ ನೀತಾ ಗುರುರಾಜ ಪೂಜಾರಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಸಿಇಓ ಪ್ರೀತಿ ಗೆಹ್ಲೋಟ್, ಎಸ್ಪಿ ನಿಶಾ ಜೇಮ್ಸ್, ಕರಾವಳಿ ಕಾವಲು ಪೊಲೀಸ್‌ನ ಎಸ್ಪಿ ಚೇತನ್ ಆರ್., ಎಡಿಸಿ ಸದಾಶಿವ ಪ್ರಭು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರಅಡಿಗ ಉಪಸ್ಥಿತರಿದ್ದರು.
ಮೆರವಣಿಗೆ: ಇಂದು ಮುಂಜಾನೆ ನಗರದ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಶಾಸಕ ರಘುಪತಿ ಭಟ್ ಪೂಜೆ ಸಲ್ಲಿಸಿದ ನಂತರ, ಕನ್ನಡನಾಡು, ನುಡಿ ಹಾಗೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ಇಲಾಖೆಗಳ ಸ್ತಬ್ಧಚಿತ್ರಗಳ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಜಿಲ್ಲಾ ಕಿ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.