×
Ad

60 ವಾರ್ಡ್‌ನಲ್ಲೂ ಪೂಜಾರಿ ಬೆಂಬಲಿಗರ ಸ್ಪರ್ಧೆ: ದ.ಕ.ಜಿಲ್ಲಾ ಕಾಂಗ್ರೆಸ್ ಸ್ಪಷ್ಟನೆ

Update: 2019-11-01 19:47 IST

ಮಂಗಳೂರು, ನ.1: ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಕೆಲವು ನಾಯಕರು ಹಿರಿಯ ನಾಯಕರ ವಿರುದ್ಧ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಆರೋಪಿಸಿದ ಹಿನ್ನಲೆಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿಕೆಯೊಂದನ್ನು ನೀಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳೆಲ್ಲರೂ ಹಿರಿಯ ನಾಯಕ ಜನಾರ್ದನ ಪೂಜಾರಿಯ ಬೆಂಬಲಿಗರೇ ಆಗಿದ್ದಾರೆ.

ಎಲ್ಲಾ 60 ವಾರ್ಡ್‌ಗಳಲ್ಲೂ ಸಾಮಾಜಿಕ ನ್ಯಾಯದ ಪ್ರಕಾರ ಟಿಕೆಟ್ ಹಂಚಿಕೆ ಮಾಡಲಾಗಿದೆ. ಟಿಕೆಟ್ ವಂಚಿತರ ಪರವಾಗಿ ಕೆಲವರು ಸುದ್ದಿಗೋಷ್ಠಿಯ ನಡೆಸಿ ಹಿರಿಯ ನಾಯಕರ ಹೆಸರಿನಲ್ಲಿ ಗೊಂದಲ ಉಂಟು ಮಾಡುವ ಯತ್ನ ಮಾಡುತ್ತಿದ್ದಾರೆ. ಪಕ್ಷದ ಹಿರಿಯ ನಾಯಕ ಜನಾರ್ದನಾ ಪೂಜಾರಿಯ ಬೆಂಬಲಿಗರು ಎನ್ನುವ ನೆಪವೊಡ್ಡಿ ಟಿಕೆಟ್ ನೀಡಿಲ್ಲ ಎಂಬ ಆರೋಪವು ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಎಲ್ಲ 60 ವಾರ್ಡ್‌ಗಳಲ್ಲೂ ಪೂಜಾರಿಯ ಬೆಂಬಲಿಗರೆ ಆಗಿದ್ದು, ಗೆಲ್ಲುವ ಅಭ್ಯರ್ಥಿಗಳಿಗಷ್ಟೇ ಟಿಕೆಟ್ ನೀಡಲಾಗಿದೆ. ಪೂಜಾರಿಯ ಮಾರ್ಗದರ್ಶನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯು ಕಾರ್ಯನಿರ್ವಹಿಸುತ್ತಿದ್ದು, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದು ಅವರ ಘನತೆಗೆ ಶೋಭೆ ತರುವಂತಹದಲ್ಲ. ವಾರ್ಡ್ ನಂಬ್ರ 17ರ ದೇರೆಬೈಲ್ ಉತ್ತರ ಕ್ಷೇತ್ರದ ಆಕಾಂಕ್ಷಿ ಪುರಂದರದಾಸ್ ಕೂಳೂರು ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾದ ಬಗ್ಗೆ ಕೆಪಿಸಿಸಿಗೆ ದೂರು ನೀಡಿರುವುದರಿಂದ ಅವರ ಬದಲಿಗೆ ಪೂಜಾರಿಯ ಆಪ್ತ, ಮಾಜಿ ಉಪಮೇಯರ್ ದಿ.ಪದಕಣ್ಣಾಯರ ಮೊಮ್ಮಗ ಮಲ್ಲಿಕಾರ್ಜುನರಿಗೆ ಟಿಕೆಟ್ ನೀಡಲಾಗಿದೆ. ಪೂಜಾರಿಯ ಶಿಫಾರಸ್ಸನ್ನು ಪಕ್ಷವು ಎಂದೂ ತಳ್ಳಿಹಾಕುವುದಿಲ್ಲ. ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳಿಗೆ ಜನಾರ್ದನ ಪೂಜಾರಿಯ ಆಶೀರ್ವಾದವೂ ಎಂದು ಸದಾಶಿವ ಉಳ್ಳಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News