ಕರಾವಳಿ ಕಾವಲು ಪಡೆ ಬಲಪಡಿಸಲು ಹೆಚ್ಚಿನ ಅನುದಾನ ಮೀಸಲು: ಬೊಮ್ಮಾಯಿ

Update: 2019-11-01 14:48 GMT

ಬೈಂದೂರು, ನ.1: ಪೊಲೀಸರ ಸ್ಥಿತಿಗತಿ ಮತ್ತು ಸೇವೆಗಳನ್ನು ಉತ್ತಮ ಗೊಳಿಸಿ, ಪೊಲೀಸ್ ಠಾಣೆಗಳನ್ನು ಬಲಪಡಿಸುವ ಮೂಲಕ ಪೊಲೀಸ್ ವ್ಯವಸ್ಥೆ ಯನ್ನು ಸುಧಾರಿಸಲು ರಾಜ್ಯ ಸರಕಾರ ಬದ್ದವಾಗಿದೆ. ಕರಾವಳಿ ಕಾವಲು ಪಡೆ ಯನ್ನು ಇನ್ನಷ್ಟು ಬಲಪಡಿಸಲು ಮುಂಬರುವ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ವನ್ನು ಮೀಸಲಿಡುವ ಕುರಿತು ಸಿಎಂ ಜೊತೆ ಚರ್ಚೆ ನಡೆಸಲಾಗಿದೆ ಎಂದು ರಾಜ್ಯ ಗೃಹ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೈಂದೂರು ಪೊಲೀಸ್ ಠಾಣೆಯ ಬಳಿ 41 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಬೈಂದೂರು ಪೊಲೀಸ್ ವೃತ್ತ ಕಚೇರಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕರಾವಳಿ ಕಾವಲು ಪಡೆಯಲ್ಲಿ ಈಗ ಇರುವ ಬೋಟ್ ಸೇರಿದಂತೆ ಇತರ ಪರಿಕರಗಳು ಸಾಕಾಗುವುದಿಲ್ಲ. ಆದುದರಿಂದ ಸ್ಪೀಡ್‌ಬೋಟ್ ಸೇರಿದಂತೆ ಯಾವುದೆಲ್ಲ ಅವಶ್ಯಕತೆ ಇದೆ ಎಂಬುದರ ಕುರಿತು ವರದಿ ತರಿಸಲಾಗುವುದು. ಹೀಗೆ ಕೇಂದ್ರ ಸರಕಾರ ನೀಡುವ ಅನುದಾನ ಮತ್ತು ರಾಜ್ಯದ ಅನುದಾನಗಳನ್ನು ಕ್ರೋಢಿಕರಿಸಿಕೊಂಡು ಕರಾವಳಿ ಕಾವಲು ಪಡೆಯನ್ನು ಬಲಪಡಿಸುವ ಕಾರ್ಯ ಮಾಡಲಾಗುವುದು ಎಂದು.

ಪೊಲೀಸರು ಅಪರಾಧವನ್ನು ಕ್ಷಿಪ್ರವಾಗಿ ಭೇದಿಸುವ ನಿಟ್ಟಿನಲ್ಲಿ ಹೊಸ ವ್ಯವಸ್ಥೆ ಯನ್ನು ಪರಿಚಯಿಸಲು ಇಲಾಖೆ ಮುಂದಾಗಿದ್ದು, ಪೊಲೀಸರಿಗೆ ಬೇಕಾಗಿರುವ ಎಲ್ಲಾ ಅಗತ್ಯ ಪರಿಕರಗಳನ್ನು ಒದಗಿಸಲಾಗುವುದು. ಈ ಎಲ್ಲ ಸುಧಾರಣೆ ಯೊಂದಿಗೆ ಪೊಲೀಸರು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ವಹಿಸಿದ್ದರು. ಉಡುಪಿ ಶಾಸಕ ರಘುಪತಿ ಭಟ್, ಭಟ್ಕಳ ಶಾಸಕ ಸುನಿಲ್ ನಾಯ್ಕಿ, ತಾಪಂ ಅಧ್ಯಕ್ಷೆ ಶ್ಯಾಮಲಾ ಕುಂದರ್, ಯಡ್ತರೆ ಗ್ರಾಪಂ ಅಧ್ಯಕ್ಷೆ ಮುಕಾಂಬು, ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಕೆ., ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ಜಿ.ನಾಯ್ಕ್, ಬೈಂದೂರು ಠಾಣಾಧಿಕಾರಿ ತಿಮ್ಮೇಶ್ ಬಿಎನ್ ಮೊದಲಾದವರು ಉಪಸ್ಥಿತರಿದ್ದರು.

ಖಾತೆಗಳ ಹಣ ವಂಚನೆ ತಡೆಗೆ ಕ್ರಮ

ತಂತ್ರಜ್ಞಾನ ಹೆಚ್ಚು ಬಳಕೆಯಿಂದ ಅಪರಾಧ ಪ್ರಕರಣಗಳು ಕೂಡ ಅಧಿಕ ವಾಗುತ್ತಿದೆ. ಆನ್‌ಲೈನ್ ಮೂಲಕ ಬ್ಯಾಂಕ್ ಖಾತೆಯ ಹಣವನ್ನು ವಂಚಿಸುವ ಹಲವು ಪ್ರಕರಣಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸೈಬರ್ ಕ್ರೈಂ ವಿಭಾಗ ವನ್ನು ಬಲಪಡಿಸುವ ಕಾರ್ಯ ಮಾಡಲಾಗುವುದು ಎಂದು ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದರಲ್ಲಿ ಬ್ಯಾಂಕ್‌ಗಳ ಪಾತ್ರವೂ ಬಹಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಹಿರಿಯ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕೆಂದು ಉನ್ನತ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಜೊತೆಯಾಗಿ ಕೆಲಸ ಮಾಡಿ ಜನ ಸಾಮಾನ್ಯರ ಹಣವನ್ನು ರಕ್ಷಣೆ ಮಾಡಬೇಕಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News