ಗಾಂಜಾ ಮಾರಾಟ: ಅಪ್ರಾಪ್ತ ಬಾಲಕ ಸಹಿತ ಇಬ್ಬರ ಬಂಧನ
ಕುಂದಾಪುರ, ನ.1: ಕುಂಭಾಶಿಯ ಹರಿಹರ ದೇವಸ್ಥಾನಕ್ಕೆ ಹೋಗುವ ರಸ್ತೆಯ ತಿರುವಿನ ಬಳಿ ಅ.31ರಂದು ಸಂಜೆ ವೇಳೆ ಕಾರಿನಲ್ಲಿ ಕುಳಿತು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕ ಸೇರಿದಂತೆ ಇಬ್ಬರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಜನ್ನಾಡಿ ಗ್ರಾಮದ ಸೌಡ ನಿವಾಸಿ ನಿಶ್ಚಲ್(22) ಹಾಗೂ 17ವರ್ಷ ವಯಸ್ಸಿನ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕ ಎಂದು ಗುರುತಿಸಲಾಗಿದೆ. ಇವರು ಹುಂಡೈ ಜಿ20 ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದು, ಈ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ. ಈ ಸಂದರ್ಭ ಸುಜಯ್ ಎಂಬಾತ ಓಡಿ ಪರಾರಿಯಾಗಿದ್ದಾನೆ.
ಬಂಧಿತರಿಂದ 20,000ರೂ. ಮೌಲ್ಯದ 604 ಗ್ರಾಂ ತೂಕದ 47 ಪ್ಯಾಕೇಟ್ ಗಾಂಜಾ, 1000 ರೂ. ಹಣ ಹಾಗೂ 8000ರೂ. ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ 2.5ಲಕ್ಷ ರೂ. ವೌಲ್ಯದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.