ತಾಯಂದಿರನ್ನು ಎಷ್ಟು ಸಮಯ ಮಕ್ಕಳಿಂದ ದೂರವಿರಿಸುತ್ತೀರಿ?
ಹೊಸದಿಲ್ಲಿ,ನ.1: ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಗಾಂಧಿನಗರದ ನಿವಾಸದಲ್ಲಿ ತನ್ನ ತಾಯಿಯನ್ನು ಭೇಟಿಯಾದ ಬೆನ್ನಿಗೇ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಇಲ್ತಿಝಾ ಮುಫ್ತಿ ಅವರು ಪ್ರಧಾನಿಯವರನ್ನುದ್ದೇಶಿಸಿ ಟ್ವಿಟರ್‌ನಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದಾರೆ.
ಮೋದಿಯವರು ತನ್ನ ತಾಯಿಯೊಂದಿಗೆ ಸೋಫಾದಲ್ಲಿ ಆಸೀನರಾಗಿದ್ದ ಫೋಟೊಗಳನ್ನು ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಇಲ್ತಿಝಾ,‘ಹೃದಯಸ್ಪರ್ಶಿ’ಎಂಬ ಅಡಿಬರಹವನ್ನು ನೀಡಿದ್ದಾರೆ. ಆದರೆ ಸಂದೇಶದ ದ್ವಿತೀಯ ಭಾಗವು ವಿಧಿ 370ರ ರದ್ದತಿಯ ಬಳಿಕ ಸಾವಿರಾರು ರಾಜಕಾರಣಿಗಳು,ರಾಜಕೀಯ ಕಾರ್ಯಕರ್ತರು ಮತ್ತು ಸಾಮಾಜಿಕ ಹೋರಾಟಗಾರರನ್ನು ಬಂಧನದಲ್ಲಿ ಇರಿಸಿರುವುದಕ್ಕಾಗಿ ಮೋದಿಯವರ ವಿರುದ್ಧ ಟೀಕಾಸ್ತ್ರವಾಗಿದೆ.
‘ಆದರೆ,ಸಾವಿರಾರು ರಾಜಕಾರಣಿಗಳು,ಸಾಮಾಜಿಕ ಹೋರಾಟಗಾರರು ಮತ್ತು ಅಪ್ರಾಪ್ತ ವಯಸ್ಕ ಬಾಲಕರನ್ನು ನೀವು ಅಕ್ರಮವಾಗಿ ಬಂಧನದಲ್ಲಿರಿಸಿ ಮೂರು ತಿಂಗಳುಗಳಾಗಿವೆ. ಇನ್ನೂ ಎಷ್ಟು ಸಮಯ ನೀವು ತಾಯಂದಿರನ್ನು ಅವರ ಪುತ್ರರಿಂದ ದೂರವಿರಿಸುತ್ತೀರಿ’ ಎಂದು ಇಲ್ತಿಝಾ ಪ್ರಶ್ನಿಸಿದ್ದಾರೆ.