“ನನ್ನನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ” ಎಂದು ಮನೆಯನ್ನೇ ಬದಲಿಸಿದ್ದಾರೆ ಈ ದೇಶದ ಅಧ್ಯಕ್ಷ!

Update: 2019-11-01 17:05 GMT

ವಾಶಿಂಗ್ಟನ್, ನ. 1: “ನನ್ನ ತವರು ನಗರದಲ್ಲಿ ನನ್ನನ್ನು ‘ಕೆಟ್ಟದಾಗಿ ನಡೆಸಿಕೊಳ್ಳಲಾಗಿದೆ’ ಎಂದು ಹೇಳಿಕೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ನನ್ನ ಖಾಯಂ ನಿವಾಸವನ್ನು ನ್ಯೂಯಾರ್ಕ್‌ನಿಂದ ಫ್ಲೋರಿಡದ ಪಾಮ್ ಬೀಚ್‌ಗೆ ಸ್ಥಳಾಂತರಿಸುತ್ತೇನೆ” ಎಂದು ಗುರುವಾರ ಘೋಷಿಸಿದ್ದಾರೆ.

‘‘ನನ್ನ ಕುಟುಂಬ ಮತ್ತು ನಾನು ಫ್ಲೋರಿಡದ ಪಾಮ್ ಬೀಚನ್ನು ನಮ್ಮ ಖಾಯಂ ನಿವಾಸವನ್ನಾಗಿ ಮಾಡಿಕೊಳ್ಳುತ್ತೇವೆ’’ ಎಂದು ಟ್ರಂಪ್ ಟ್ವೀಟ್ ಮಾಡಿದ್ದರೆ.

‘‘ನಾನು ನ್ಯೂಯಾರ್ಕ್ ಮತ್ತು ನ್ಯೂಯಾರ್ಕ್‌ನ ಜನರನ್ನು ಪ್ರೀತಿಸುತ್ತೇನೆ ಹಾಗೂ ಯಾವಾಗಲೂ ಪ್ರೀತಿಸುತ್ತೇನೆ. ಆದರೆ, ದುರದೃಷ್ಟವಶಾತ್, ಪ್ರತಿ ವರ್ಷ ನಾನು ಲಕ್ಷಾಂತರ ಡಾಲರ್‌ಗಳನ್ನು ತೆರಿಗೆ ರೂಪದಲ್ಲಿ ನ್ಯೂಯಾರ್ಕ್ ನಗರ ಮತ್ತು ರಾಜ್ಯಕ್ಕೆ ಪಾವತಿಸುತ್ತಿದ್ದರೂ, ನಗರ ಮತ್ತು ರಾಜ್ಯದ ರಾಜಕೀಯ ನಾಯಕರು ನನ್ನನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ’’ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.

ತಮ್ಮ ಪ್ರಾಥಮಿಕ ನಿವಾಸವನ್ನು ಮ್ಯಾನ್ ‌ಹಟನ್‌ ನಿಂದ ಪಾಮ್ ಬೀಚ್‌ಗೆ ಸ್ಥಳಾಂತರಿಸುವ ಬಗ್ಗೆ ನ್ಯೂಯಾರ್ಕ್ ನಿವಾಸಿಯಾಗಿರುವ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಸೆಪ್ಟಂಬರ್‌ನಲ್ಲಿ ವೈಯಕ್ತಿಕ ಘೋಷಣೆಗಳನ್ನು ಸಲ್ಲಿಸಿದ್ದಾರೆ ಎಂದು ‘ನ್ಯೂಯಾರ್ಕ್ ಟೈಮ್ಸ್’ನ ವರದಿಯೊಂದು ತಿಳಿಸಿದೆ.

 ಟ್ರಂಪ್ ತನ್ನ ಪ್ರಾಥಮಿಕ ನಿವಾಸವನ್ನು ಯಾಕೆ ಬದಲಾಯಿಸುತ್ತಿದ್ದಾರೆ ಎಂಬುದನ್ನು ತಿಳಿಸಲು ಶ್ವೇತಭವನದ ಅಧಿಕಾರಿಗಳು ನಿರಾಕರಿಸಿದ್ದಾರೆ ಎಂಬುದಾಗಿಯೂ ಪತ್ರಿಕೆ ಬರೆದಿದೆ. ಆದರೆ, ಮುಖ್ಯವಾಗಿ ತೆರಿಗೆ ಉದ್ದೇಶಗಳಿಗಾಗಿ ಟ್ರಂಪ್ ಹೀಗೆ ಮಾಡಿದ್ದಾರೆ ಎಂದು ಅವರ ನಿಕಟವರ್ತಿಯೊಬ್ಬರು ಹೇಳಿದ್ದಾರೆ ಎಂಬುದಾಗಿಯೂ ಅದು ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News