ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆ ದಿನ ಸಿಖ್ಖರಿಂದ ಶುಲ್ಕ ಪಡೆಯುವುದಿಲ್ಲ

Update: 2019-11-01 17:12 GMT

ಇಸ್ಲಾಮಾಬಾದ್, ನ. 1: ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಯಾಗುವ ದಿನವಾದ ನವೆಂಬರ್ 9ರಂದು ಭಾರತೀಯ ಯಾತ್ರಿಕರಿಂದ ಶುಲ್ಕ ವಸೂಲು ಮಾಡಲಾಗುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಶುಕ್ರವಾರ ಹೇಳಿದ್ದಾರೆ. ಅದೇ ವೇಳೆ, ಕರ್ತಾರ್‌ಪುರಕ್ಕೆ ಭೇಟಿ ನೀಡಲು ಭಾರತದ ಸಿಖ್ ಯಾತ್ರಿಕರಿಗೆ ಪಾಸ್‌ಪೋರ್ಟ್ ಬೇಕಾಗಿಲ್ಲ ಎಂಬುದಾಗಿಯೂ ಅವರು ಟ್ವೀಟೊಂದರಲ್ಲಿ ಹೇಳಿದ್ದಾರೆ.

‘‘ಭಾರತದಿಂದ ಕರ್ತಾರ್‌ಪುರಕ್ಕೆ ಯಾತ್ರೆಗಾಗಿ ಆಗಮಿಸುವ ಸಿಖ್ಖರಿಗಾಗಿ ನಾನು ಎರಡು ವಿನಾಯಿತಿಗಳನ್ನು ನೀಡಿದ್ದೇನೆ: 1)ಅವರು ಪಾಸ್‌ಪೋರ್ಟ್ ಹೊಂದಿರಬೇಕಾದ ಅಗತ್ಯವಿಲ್ಲ; ಒಂದು ಗುರುತುಪತ್ರವಿದ್ದರೆ ಸಾಕು. 2)ಅವರು ಇನ್ನು 10 ದಿನಗಳ ಮೊದಲು ನೋಂದಣಿ ಮಾಡಬೇಕಾಗಿಲ್ಲ. ಅದೂ ಅಲ್ಲದೆ, ಕರ್ತಾರ್‌ಪುರ ಕಾರಿಡಾರ್ ಉದ್ಘಾಟನೆಯಾಗುವ ದಿನ ಹಾಗೂ ಗುರೂಜಿಯ 550ನೇ ಹುಟ್ಟುಹಬ್ಬದ ದಿನ ಯಾತ್ರಿಕರಿಂದ ಯಾವುದೇ ಶುಲ್ಕವನ್ನು ಸ್ವೀಕರಿಸಲಾಗುವುದಿಲ್ಲ’’ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ಗುರುದ್ವಾರ ಕರ್ತಾರ್‌ಪುರ ಸಾಹಿಬ್ ಮತ್ತು ಭಾರತದ ಗುರುದಾಸ್‌ಪುರದಲ್ಲಿರುವ ದೇರಾ ಬಾಬಾ ನಾನಕ್ ಮಂದಿರಗಳನ್ನು ಕರ್ತಾರ್‌ಪುರ ಕಾರಿಡಾರ್ ಸಂಪರ್ಕಿಸುತ್ತದೆ.

ನವೆಂಬರ್ 9ರಂದು ಪ್ರಧಾನಿ ನರೇಂದ್ರ ಮೋದಿ ಗುರುದಾಸ್‌ಪುರದಲ್ಲಿ ಕಾರಿಡಾರನ್ನು ಉದ್ಘಾಟಿಸಿದರೆ, ಇಮ್ರಾನ್ ಖಾನ್ ಗುರುದ್ವಾರ ಕರ್ತಾರ್‌ಪುರ ಸಾಹಿಬ್‌ನಲ್ಲಿ ಕಾರಿಡಾರ್ ಉದ್ಘಾಟಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News