ಯಕ್ಷಾಂಗಣ ಗೌರವ ಪ್ರಶಸ್ತಿಗೆ ಕೋಳ್ಯೂರು ರಾಮಚಂದ್ರ ರಾವ್ ಆಯ್ಕೆ
ಮಂಗಳೂರು, ನ. 2:‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ-ಮಂಥನ ಮತ್ತು ಪ್ರದರ್ಶನ ವೇದಿಕೆಯು ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸುವ ಯಕ್ಷಗಾನ ತಾಳಮದ್ದಳೆ ಸಪ್ತಾಹದಲ್ಲಿ ನೀಡುವ ಗೌರವ ಪ್ರಶಸ್ತಿಗೆ 2018-19ನೇ ಸಾಲಿನಲ್ಲಿ ಹಿರಿಯ ಯಕ್ಷಗಾನ ಸ್ತ್ರೀವೇಷಧಾರಿ 82ರ ಹರೆಯದ ಡಾ. ಕೋಳ್ಯೂರು ರಾಮಚಂದ್ರರಾವ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನ.23ರಂದು ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.
ಕೋಳ್ಯೂರು ರಾಮಚಂದ್ರ ರಾವ್: ಕಾಸರಗೋಡು ಜಿಲ್ಲೆಯ ಕೋಳ್ಯೂರಿನಲ್ಲಿ ದಿ.ನಾರಾಯಣ ಭಟ್ ಮತ್ತು ರಾಧಮ್ಮ ದಂಪತಿಗೆ ಜನಿಸಿದ ರಾಮಚಂದ್ರರಾಯರು ಕುರಿಯ ವಿಠಲ ಶಾಸ್ತ್ರಿ ಯವರಿಂದ ಯಕ್ಷಗಾನದ ದೀಕ್ಷೆ ಪಡೆದರು. ಸ್ತ್ರೀ ವೇಷ ಹಾಗೂ ಪುಂಡುವೇಷಗಳಲ್ಲಿ ಪ್ರೌಢಿಮೆಯನ್ನು ಸಾಧಿಸಿ ಅಗ್ರಮಾನ್ಯ ಕಲಾವಿದರೆನಿಸಿಕೊಂಡರು. ಕಟೀಲು, ಧರ್ಮಸ್ಥಳ,ಸುರತ್ಕಲ್,ಕೂಡ್ಲು, ಬಪ್ಪನಾಡು, ಕರ್ನಾಟಕ ಮೇಳಗಳಲ್ಲಿ ಸುಮಾರು 45 ವರ್ಷಗಳ ತಿರುಗಾಟ ನಡೆಸಿದ ಗರಿಮೆ ಅವರದ್ದಾಗಿದೆ.