ಕೇಂದ್ರದಿಂದ ದೂರವಾಣಿ ಕದ್ದಾಲಿಕೆ: ಮಮತಾ ಬ್ಯಾನರ್ಜಿ ಗಂಭೀರ ಆರೋಪ

Update: 2019-11-03 03:53 GMT

ಕೊಲ್ಕತ್ತಾ, ನ.3: ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಆಡಳಿತದ ಒಂದು ರಾಜ್ಯ ಸರ್ಕಾರ ಸೇರಿದಂತೆ ಎರಡು ರಾಜ್ಯಗಳು ತಮ್ಮ ದೂರವಾಣಿ ಕದ್ದಾಲಿಕೆ ಮಾಡುತ್ತಿವೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ.

"ನಾನು ಮುಕ್ತವಾಗಿ ದೂರವಾಣಿ, ಮೊಬೈಲ್ ಅಥವಾ ವಾಟ್ಸ್‌ಆ್ಯಪ್‌ನಲ್ಳೂ ಮಾತನಾಡುವಂತಿಲ್ಲ. ನಾನು ಕೆಲವರಿಗೆ ಕರೆ ಮಾಡಿದ ತಕ್ಷಣ ಮತ್ತೆ ಕೆಲವರು ನಮ್ಮ ಸಂಭಾಷಣೆ ಆಲಿಸುತ್ತಾರೆ. ಈಗ ಯಾವುದೂ ಸುರಕ್ಷಿತವಲ್ಲ; ವಾಟ್ಸ್‌ಆ್ಯಪ್ ಕೂಡಾ. ಕೇಂದ್ರ ಸರ್ಕಾರ ಮತ್ತು ಬಿಜೆಪಿ ಆಡಳಿತದ ಒಂದು ರಾಜ್ಯ ಸರ್ಕಾರ ಸೇರಿದಂತೆ ಎರಡು ಸರ್ಕಾರಗಳ ನಿರ್ದೇಶನದ ಅನ್ವಯ ಕದ್ದಾಲಿಕೆ ಮಾಡಲಾಗುತ್ತಿದೆ. ಈ ವಿಷಯದ ಬಗ್ಗೆ ಗಮನ ಹರಿಸುವಂತೆ ಪ್ರಧಾನಿಗೆ ಮನವಿ ಮಾಡಲಿದ್ದೇನೆ" ಎಂದು ಸ್ಪಷ್ಟಪಡಿಸಿದರು.

 ಈ ಕದ್ದಾಲಿಕೆಯನ್ನು ಕಟುವಾಗಿ ಟೀಕಿಸಿದ ಅವರು, "ಇದು ತಪ್ಪು; ಜನರ ಖಾಸಗಿತನವನ್ನು ನೀವು ಉಲ್ಲಂಘಿಸಬಾರದು. ನಮ್ಮ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯವಿದೆ. ಆದರೆ ಇದು ಯಾವ ಬಗೆಯ ಸ್ವಾತಂತ್ರ್ಯ? ನಮ್ಮ ಮಾತನ್ನು ದಾಖಲು ಮಾಡಿಕೊಳ್ಳುವ ವ್ಯವಸ್ಥೆ ಇರುವುದರಿಂದ ನಾವು ಮುಕ್ತವಾಗಿ ಮಾತನಾಡುವಂತೆಯೂ ಇಲ್ಲ" ಎಂದು ಹೇಳಿದರು.

ಪಶ್ಚಿಮ ಬಂಗಾಳದ ಇತರ ರಾಜಕಾರಣಿಗಳ ಮತ್ತು ಉನ್ನತ ಅಧಿಕಾರಿಗಳ ಚಲನವಲನಗಳ ಬಗ್ಗೆ ಕೂಡಾ ಕಣ್ಗಾವಲು ಇಡಲಾಗಿದೆ ಎಂದು ಅವರು ಆಪಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News