121 ಮಂದಿಯ ಮೇಲೆ ಬೇಹುಗಾರಿಕೆ: ಭಾರತದ ಅಧಿಕಾರಿಗಳಿಗೆ ಸೆಪ್ಟಂಬರ್ ನಲ್ಲೂ ಎಚ್ಚರಿಕೆ ನೀಡಿತ್ತು ವಾಟ್ಸ್ ಆ್ಯಪ್

Update: 2019-11-03 07:29 GMT

ಹೊಸದಿಲ್ಲಿ, ನ.3: ಇಸ್ರೇಲಿ ಸ್ಪೈವೇರ್ ಬಳಸಿ 121 ಮಂದಿ ಭಾರತೀಯರ ಫೋನ್‌ ಗಳನ್ನು ಬೇಹುಗಾರಿಕೆಗೆ ಗುರಿಮಾಡಲಾಗುತ್ತಿದೆ ಎಂದು ಭಾರತೀಯ ಅಧಿಕಾರಿಗಳಿಗೆ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಮಾಹಿತಿ ನೀಡಲಾಗಿದೆ ಎಂದು ಫೇಸ್‌ ಬುಕ್ ಮಾಲಕತ್ವದ ವಾಟ್ಸ್ ಆ್ಯಪ್ ದೃಢಪಡಿಸಿದೆ.

ಕಂಪನಿಯ ಮೂಲಗಳ ಪ್ರಕಾರ, ಈ ಖಾಸಗಿತನ ಉಲ್ಲಂಘನೆಯ ಬಗ್ಗೆ ಮೇ ತಿಂಗಳಲ್ಲಿ ಎಚ್ಚರಿಕೆ ನೀಡಿದ ಬಳಿಕ ಈ ಮೆಸ್ಸೇಜಿಂಗ್ ಪ್ಲಾಟ್‌ ಫಾರಂ ಭಾರತೀಯ ಅಧಿಕಾರಿಗಳಿಗೆ ಮಾಹಿತಿ ನೀಡಿರುವುದು ಎರಡನೇ ಬಾರಿ. 121 ಬಳಕೆದಾರರಿಗೆ ಕೂಡಾ ಈ ಭದ್ರತಾ ಉಲ್ಲಂಘನೆ ಬಗ್ಗೆ ಎಚ್ಚರಿಕೆ ಸಂದೇಶ ನೀಡಲಾಗಿತ್ತು.

ಇಸ್ರೇಲಿ ಸ್ಪೈವೇರ್ 'ಪೆಗಾಸಸ್' ಬಳಸಿಕೊಂಡು ಭಾರತೀಯ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಕೂಡಾ ಜಾಗತಿಕವಾಗಿ ಬೇಹುಗಾರಿಕೆಗೆ ಒಳಗಾದವರಲ್ಲಿ ಸೇರಿದ್ದಾರೆ ಎಂದು ಭಾರತ ಸರ್ಕಾರ ದೃಢಪಡಿಸಿ, ಸಾಮಾಜಿಕ ಜಾಲತಾಣದಿಂದ ಈ ಬಗ್ಗೆ ಗುರುವಾರ ವಿವರಣೆ ಕೇಳಿತ್ತು.

ಬಳಕೆದಾರರು ವಿಡಿಯೊ ಕರೆ ಸ್ವೀಕರಿಸಿದಾಗ ಸ್ಪೈವೇರ್ 'ಪೆಗಾಸಸ್' ಬಳಕೆದಾರರ ಫೋನ್ ಪ್ರವೇಶಿಸುತ್ತದೆ. ಫೋನ್ ರಿಂಗ್ ಆದ ತಕ್ಷಣ ದಾಳಿಕೋರ ಈ ಸಂಕೇತವನ್ನು ರವಾನಿಸಿ ಸ್ಪೈವೇರ್ ಅಳವಡಿಕೆಯಾಗುವಂತೆ ಮಾಡುತ್ತಾನೆ. ಬಳಕೆದಾರ ಕರೆ ಸ್ವೀಕರಿಸದಿದ್ದರೂ, ವೈರಸ್ ಅಳವಡಿಸಲ್ಪಟ್ಟಿರುತ್ತದೆ. ವಾಟ್ಸ್ ಆ್ಯಪ್ ಮೆಸೇಜ್, ಕರೆ, ಸಾಮಾನ್ಯ ಧ್ವನಿಕರೆ, ಪಾಸ್‌ವರ್ಡ್, ಸಂಪರ್ಕ ಪಟ್ಟಿ, ಕ್ಯಾಲೆಂಡರ್ ಈವೆಂಟ್ಸ್, ಮೈಕ್ರೋಫೋನ್ ಹಾಗೂ ಕ್ಯಾಮರಾ ಹೀಗೆ ಬಳಕೆದಾರನ ಫೋನ್ ಪ್ರವೇಶಿಸುತ್ತಾನೆ.

ಆದ್ದರಿಂದ ಕ್ಯಾಮರಾ ಆನ್ ಮಾಡಲು ಮತ್ತು ಮೈಕ್ ಆನ್ ಮಾಡಲು, ಬಳಕೆದಾರನ ಸುತ್ತ ಏನಾಗುತ್ತಿದೆ ಎಂದು ತಿಳಿಯಲು ಮತ್ತು ಕೇಳಿಸಿಕೊಳ್ಳಲು ಈ ಮೂಲಕ ಸಾಧ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News