ಮೋದಿ ಕಾರ್ಯಕ್ರಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಪ್ರಸಿದ್ಧ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ

Update: 2019-11-03 07:30 GMT

ಚೆನ್ನೈ, ನ.3: ಇತ್ತೀಚೆಗೆ ನಡೆದ ಪ್ರಧಾನಿ ನರೇಂದ್ರ ಮೋದಿಯವರ ಔತಣಕೂಟವೊಂದರ ಬಗ್ಗೆ ಪ್ರಸಿದ್ಧ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ತನ್ನನ್ನು ಹಾಗೂ ಇತರರನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಇದು  ದ್ವಿಮುಖ ಧೋರಣೆ ಮತ್ತು ಕೆಲ ನಿರ್ದಿಷ್ಟ ಚಿತ್ರತಾರೆಯರ ಬಗೆಗಿನ ಪಕ್ಷಪಾತದ ಧೋರಣೆಯನ್ನು ತೋರಿಸುತ್ತದೆ ಎಂದು ಫೇಸ್‌ ಬುಕ್‌ನಲ್ಲಿ ಕಿಡಿಕಾರಿದ್ದಾರೆ.

ಪ್ರತಿಯೊಬ್ಬರ ಫೋನ್‌ ಗಳನ್ನು ಕಸಿದುಕೊಂಡು ಟೋಕನ್ ನೀಡಲಾಗಿತ್ತು. ಆದರೆ ಕೇವಲ ಬಾಲಿವುಡ್ ತಾರೆಯರು ಮಾತ್ರ ಪ್ರಧಾನಿ ನರೇಂದ್ರ ಮೋದಿ ಜತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೇಗೆ ಮತ್ತು ಏಕೆ ಸಾಧ್ಯವಾಗಿದೆ ಎಂದು ಎಸ್‌ ಪಿಬಿ ಪ್ರಶ್ನಿಸಿದ್ದಾರೆ. ಇವರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

"ರಾಮೋಜಿ ರಾವ್‌ ಜಿ (ಈ ನಾಡು) ಅವರಿಗೆ ನಾನು ಕೃತಜ್ಞ. ಅವರ ಕಾರಣದಿಂದಾಗಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರ ನಿವಾಸದಲ್ಲಿ ಅಕ್ಟೋಬರ್ 29ರಂದು ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಳ್ಳುವುದು ಸಾಧ್ಯವಾಯಿತು. ಆ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ, ನಮ್ಮ ಮೊಬೈಲ್ ಫೋನ್‌ ಗಳನ್ನು ಭದ್ರತಾ ಸಿಬ್ಬಂದಿಗೆ ನೀಡುವಂತೆ ಹಾಗೂ ಅದಕ್ಕೆ ಟೋಕನ್ ಪಡೆಯುವಂತೆ ಸೂಚಿಸಲಾಯಿತು. ಆದರೆ ಅದೇ ದಿನ ಬಾಲಿವುಡ್ ತಾರೆಯರು ಮೋದಿ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದುದು ಕಂಡು ದಿಗ್ಭ್ರಮೆಯಾಗಿದೆ. ನೀವು ಹ್ಞೂಂ ಎಂದು ಅಚ್ಚರಿಪಡುವಂಥ ಬೆಳವಣಿಗೆ" ಎಂದು ಎಸ್ಪಿಬಿ ಟ್ವೀಟ್ ಮಾಡಿದ್ದಾರೆ.

ಮೋದಿ ಆಯೋಜಿಸಿದ್ದ ಕೂಟದಲ್ಲಿ ಬಾಲಿವುಡ್ ತಾರೆಯರಾದ ಶಾರೂಖ್ ಖಾನ್, ಆಮಿರ್‌ ಖಾನ್ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News