ಫಾ.ಮಹೇಶ್ ಡಿಸೋಜ ಸಾವು ಪ್ರಕರಣ: ಮುಂದುವರಿದ ಪ್ರತಿಭಟನೆ
ಶಿರ್ವ, ನ.3: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ. ಮಹೇಶ್ ಡಿಸೋಜ ಸಾವಿನ ಕುರಿತ ತನಿಖೆಯ ಮಾಹಿತಿ ನೀಡಬೇಕೆಂದು ಆಗ್ರಹಿಸಿ ಚರ್ಚ್‌ನ ಭಕ್ತರು ಹಮ್ಮಿಕೊಂಡಿದ್ದ ಪ್ರತಿಭಟನೆ ರವಿವಾರವೂ ಮುಂದುವರಿದಿದ್ದು, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದಲ್ಲಿ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.
ಅ.11ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಫಾ. ಮಹೇಶ್ ಡಿಸೋಜ ಸಾವಿಗೆ ನ್ಯಾಯ ದೊರೆಯಬೇಕೆಂದು ಒತ್ತಾಯಿಸಿ ಬೆಳಗ್ಗೆಯಿಂದಲೇ ಸಾವಿರಾರು ಸಂಖ್ಯೆಯ ಭಕ್ತರು ಚರ್ಚ್ ಆವರಣದಲ್ಲಿ ಜಮಾಯಿಸಿದರು. ಶನಿವಾರ ರಾತ್ರಿ ತೆಗೆದುಕೊಂಡ ತೀರ್ಮಾನದಂತೆ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಶಿರ್ವ ಚರ್ಚ್‌ಗೆ ಆಗಮಿಸಿ ಪಾಲಾನ ಸಮಿತಿಯ ಸಭೆ ನಡೆಸಿದರು.
ಈ ಮಧ್ಯೆ ಪ್ರತಿಭಟನಕಾರರು ಚರ್ಚ್‌ನ ನ್ಯಾಯದ ಗಂಟೆ ಬಾರಿಸಲು ಮುಂದಾದರು. ಆಗ ಪೊಲೀಸರು ಅವರನ್ನು ತಡೆದಾಗ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಚರ್ಚ್‌ನ ಪ್ರಧಾನ ಧರ್ಮಗುರುಗಳ ನಿವಾಸದ ಒಳಗೆ ಇದ್ದ ಬಿಷಪ್ ಹೊರಗಡೆ ಬಂದು ಮಾಹಿತಿ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ತನಿಖೆಯಲ್ಲಿ ಹಸ್ತಕ್ಷೇಪ ಇಲ್ಲ
ಬಳಿಕ ಹೊರಗಡೆ ಆಗಮಿಸಿದ ಬಿಷಪ್ ಅ. ವಂ.ಜೆರಾಲ್ಡ್ ಐಸಾಕ್ ಲೋಬೊ ಮಾತನಾಡಿ, ನಿಮ್ಮ ನೋವು ನಮಗೆ ಅರ್ಥ ವಾಗುತ್ತದೆ. ಈ ಪ್ರಕರಣದ ತನಿಖೆಯಲ್ಲಿ ನಾವು ಯಾರು ಕೂಡ ಹಸ್ತಕ್ಷೇಪ ಮಾಡುತ್ತಿಲ್ಲ. ಪೊಲೀಸರಿಗೆ ಮುಕ್ತವಾಗಿ ತನಿಖೆ ಮಾಡಲು ಅವಕಾಶ ಮಾಡಿ ಕೊಟ್ಟಿದ್ದೇವೆ ಎಂದರು.
ಫಾ. ಮಹೇಶ್ ಡಿಸೋಜ ಅವರ ಕುಟುಂಬದವರೇ ಈ ತನಿಖೆ ಮುಂದು ವರೆಸುವುದು ಬೇಡ ಎಂಬುದಾಗಿ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಈ ಪ್ರಕರಣದ ಸತ್ಯ ಹೊರಗಡೆ ಬರಬೇಕೆಂದು ನಾವು ಕೂಡ ಒತ್ತಾಯ ಮಾಡುತ್ತಿದ್ದೇವೆ. ಈ ವಿಚಾರದಲ್ಲಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ಬಿಷಪ್ ಮಾತಿಗೆ ತೃಪ್ತರಾಗದ ಪ್ರತಿಭಟನಕಾರರು ಘೋಷಣೆಗಳನ್ನು ಮುಂದುವರೆಸಿದರು. ಶಿರ್ವ ಚರ್ಚ್‌ನ ಪ್ರಧಾನ ಧರ್ಮಗುರು ಫಾ. ಡೆನ್ನಿಸ್ ಡೇಸಾ ಹಾಗೂ ಸಹಾಯಕ ಧರ್ಮ ಗುರು ಫಾ.ಅಶ್ವಿನ್ ಅರ್ಹಾನ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಪ್ರತಿಭಟನಕಾರರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಷಪ್, ಈ ಬಗ್ಗೆ ಕೂಲಂಕಷ ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು.
ಉನ್ನತ ಮಟ್ಟದ ತನಿಖೆಗೆ ಆಗ್ರಹ
ಫಾ.ಮಹೇಶ್ ಡಿಸೋಜ ಸಾವಿನ ಬಗ್ಗೆ ಹಲವಾರು ಸಂಶಯಗಳಿರುವುದರಿಂದ ಈ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ನಡೆಸಬೇಕು ಎಂಬ ಕೂಗು ಈ ಸಂದರ್ಭದಲ್ಲಿ ಕೇಳಿಬಂತು.
ಸ್ಥಳಕ್ಕೆ ಆಗಮಿಸಿದ ಕಾಪು ಶಾಸಕ ಲಾಲಾಜಿ ಆರ್.ಮೆಂಡನ್, ಪ್ರತಿಭಟನಕಾರರನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರು. ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಪ್ಪಿಸುವಂತೆ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು.
ಆತ್ಮಹತ್ಯೆಗೆ ಕಾರಣ ಏನು ಎಂಬುದು ಬಯಲಾಗಬೇಕು. ಆದುದರಿಂದ ಚರ್ಚ್ ವತಿಯಿಂದಲೇ ದೂರು ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು. ಅದೇ ರೀತಿ ಸ್ಥಳಕ್ಕೆ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ಪ್ರಮೋದ್ ಮಧ್ವರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಕರಣದ ನಿಷ್ಪಕ್ಷ ಪಾತ ತನಿಖೆಗೆ ಒತ್ತಾಯಿಸಿದರು.
ತನಿಖೆ ಬಗ್ಗೆ ಎಸ್ಪಿ ಮಾಹಿತಿ
ಮಧ್ಯಾಹ್ನ ವೇಳೆ ಸ್ಥಳಕ್ಕೆ ಆಗಮಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತನಿಖೆಯ ಬಗ್ಗೆ ಪ್ರತಿಭಟನಕಾರರಿಗೆ ಮಾಹಿತಿ ನೀಡಿದರು. ಫಾ.ಮಹೇಶ್ ಡಿಸೋಜ ಅವರ ಚಿಕ್ಕಪ್ಪ ನೀಡಿದ ದೂರಿನಂತೆ ಅಸ್ವಾಭವಿಕ ಸಾವು ಪ್ರಕರಣವನ್ನು ಶಿರ್ವ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ಅದರಂತೆ ಅಧಿಕಾರಿಗಳು ಮೃತದೇಹದ ತನಿಖೆ ಮಾಡಿದ್ದಾರೆ. ಇದಕ್ಕೆ ಮೃತರ ತಾಯಿ, ಸಹೋದರ ಸಾಕ್ಷಿಯಾಗಿದ್ದಾರೆ. ಅವರಿಗೆ ಈ ಸಾವಿನ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ತಿಳಿಸಿದರು.
ಈವರೆಗೆ ನಡೆಸಿದ ತನಿಖೆಯಿಂದ ಹಾಗೂ ವೈದ್ಯಕೀಯ ಶವ ಪರೀಕ್ಷಾ ವರದಿಯಿಂದ ಮೃತ ಪಾಧರ್ ತಮ್ಮದೇ ಆದ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು ಇವರ ಸಾವು ಕೊಲೆ ಅಥವಾ ಅಪರಾಧಿಕ ದುಷ್ಪ್ರೇರಣೆಯಿಂದ ನಡೆದಿರುವುದು ತನಿಖೆಯಿಂದ ಈವರೆಗೆ ಕಂಡು ಬಂದಿಲ್ಲ ಎಂದರು.
ಫಾದರ್ ಆತ್ಮಹತ್ಯೆ ಮಾಡಿಕೊಂಡ ಸ್ಕೂಲ್‌ನ ಸಿಸಿ ಕ್ಯಾಮೆರಾ ಆಫ್ ಆಗಿದ್ದರೂ ಬೇರೆ ಕ್ಯಾಮೆರಾದಲ್ಲಿ ಸ್ವತಃ ಫಾದರ್ ಹಗ್ಗವನ್ನು ತನ್ನ ಕೋಣೆಗೆ ತೆಗೆದುಕೊಂಡು ಹೋಗಿರುವುದು ಕಂಡುಬಂದಿದೆ. ಮರಣೋತ್ತರ ಪರೀಕ್ಷೆ ಯಲ್ಲಿ ಸಂಗ್ರಹಿಸಿದ ದೇಹದ ಅಂಗಾಗಗಳನ್ನು ಮಂಗಳೂರಿನ ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಈ ವರದಿಯು ಬಂದ ಮೇಲೆ ಲಭ್ಯ ಸಾಕ್ಷ್ಯಾದಾರಗಳನ್ನು ಆಧರಿಸಿ ಅಂತಿಮ ವರದಿಯನ್ನು ತಯಾರಿಸಲಾಗುತ್ತದೆ ಎಂದರು.
ಅದೇ ರೀತಿ ಫಾದರ್ ಅವರ ಎರಡು ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಪರೀಕ್ಷೆಗಾಗಿ ಬೆಂಗಳೂರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅದರಲ್ಲಿನ ಡೇಟಾಗಳನ್ನು ಪರಿಶೀಲನೆ ಮಾಡಬೇಕಾಗಿದೆ ಎಂದು ಎಸ್ಪಿ ನಿಶಾ ಜೇಮ್ಸ್ ಮಾಹಿತಿ ನೀಡಿದರು.
ಅನುಮಾನಗಳಿದ್ದರೆ ದೂರು ನೀಡಿ: ಎಸ್ಪಿ
ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ನಾವು ಯಾವುದೇ ತೀರ್ಮಾನಕ್ಕೆ ಬರಲು ಸಾಧ್ಯ. ತನಿಖೆ ಹಂತದಲ್ಲಿ ಎಲ್ಲ ಮಾಹಿತಿಯನ್ನು ಬಹಿ ರಂಗವಾಗಿ ಹೇಳಲು ಆಗುವುದಿಲ್ಲ. ಆದರೂ ಇವರ ಸಾವಿನ ಬಗ್ಗೆ ಯಾವುದೇ ಅನುಮಾನಗಳಿದ್ದರೆ ಯಾರು ಕೂಡ ಶಿರ್ವ ಪೊಲೀಸ್ ಠಾಣೆಗೆ ದೂರು ನೀಡಬಹುದು. ನಾವು ಅದರಂತೆ ಪ್ರಕರಣ ದಾಖಲಿಸಿ ತನಿಖೆ ಮಾಡುತ್ತೇವೆ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.
ಮೃತರ ತಂದೆ ತಾಯಿ ಸಹೋದರರು ನಮ್ಮನ್ನು ಭೇಟಿಯಾಗಿದ್ದಾರೆ. ಅವರಿಗೆ ತನಿಖೆಯ ಮಾಹಿತಿ ನೀಡಿದ್ದೇವೆ. ಈ ಪ್ರಕರಣದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಿದರೂ ನಮ್ಮದು ಯಾವುದೇ ಅಭ್ಯಂತರ ಇಲ್ಲ. ನಿಷ್ಪಕ್ಷಪಾತ ತನಿಖೆ ಆಗಬೇಕೆಂಬುದೇ ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.