×
Ad

ಟೈಲರ್ಸ್‌ ಬೇಡಿಕೆಗಳ ಬಗ್ಗೆ ನ.15ರೊಳಗೆ ಸಿಎಂ ಜೊತೆ ಚರ್ಚೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ

Update: 2019-11-03 17:44 IST

ಉಡುಪಿ, ನ.3: ಟೈಲರ್ಸ್‌ಗಳ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಲು ನ.15ರೊಳಗೆ ಮುಖ್ಯಮಂತ್ರಿ ಜೊತೆ ಟೈಲರ್ಸ್‌ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಲು ಯೋಜಿಸಲಾಗಿದೆ ಎಂದು ರಾಜ್ಯ ಮೀನುಗಾರಿಕಾ, ಬಂದರು ಮತ್ತು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ರವಿವಾರ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾ ಭವನದಲ್ಲಿ ಆಯೋಜಿಸಲಾದ ಸ್ಮಾರ್ಟ್‌ಕಾರ್ಡ್ ವಿತರಣೆ ಮತ್ತು ಕ್ರೀಡಾಕೂಟ ಹಾಗೂ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೇವಲ ಮುಖ್ಯಮಂತ್ರಿಯನ್ನು ನಿಯೋಗ ಭೇಟಿ ಮಾಡಿ ಮನವಿ ಕೊಟ್ಟರೆ ಯಾವುದೇ ಪ್ರಯೋಜನ ಇಲ್ಲ. ಅದರ ಬದಲು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಯ ಜೊತೆ ಸಭೆ ನಡೆಸಿ ಟೈಲರ್ಸ್‌ ಗಳ ಮಕ್ಕಳ ಶಿಕ್ಷಣ, ವಿವಾಹ, ಆರೋಗ್ಯ, ಅನಾಹುತ ಸಂಭವಿಸಿದಾಗ ಪರಿಹಾರ ಮತ್ತು ಪಿಂಚಣಿ ಕುರಿತು ರ್ಚೆ ನಡೆಸಲಾಗುವುದು ಎಂದರು.

ಆನ್‌ಲೈನ್ ಮೂಲಕ ಬಟ್ಟೆ ಖರೀದಿಯಿಂದ ಟೈಲರ್ಸ್‌ಗಳ ವೃತ್ತಿಗೆ ಹೊಡೆತ ಬೀಳುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಗುಣಮಟ್ಟದ ಟೈಲ ರಿಂಗ್ ಮಾಡುವವರಿಗೆ ಯಾವತ್ತು ಕೂಡ ಬೇಡಿಕೆ ಕಡಿಮೆ ಆಗುವುದಿಲ್ಲ. ಹೊಸ ವ್ಯವಸ್ಥೆಗಳು ಬಂದಾಗ ಅದನ್ನು ಸವಾಲು ಆಗಿ ಸ್ವೀಕರಿಸಿ ನಾವು ಕೂಡ ಹೊಸ ಕಲ್ಪನೆಯನ್ನು ಕೊಡಬೇಕು. ಇದರಿಂದ ವೃತ್ತಿಗೆ ಯಾವುದೇ ಧಕ್ಕೆ ಬರು ವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟರು.

ಕರ್ನಾಟಕ ಸ್ಟೇಟ್ ಟೈಲರ್ಸ್‌ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಕೆ.ಎಸ್. ಆನಂದ ಮಾತನಾಡಿ, ಟೈಲರ್ಸ್‌ಗಳಿಗೆ ಸರಕಾರ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ನಾವು ಮತ ಹಾಕಿ ಗೆಲ್ಲಿಸುವ ಶಾಸಕರು, ಸಂಸದರಿಗೆ ಜೀವ ಮಾನ ಇಡೀ ಪಿಂಚಣಿ ನೀಡಲಾಗುತ್ತದೆ. ಅದೇ ರೀತಿ ಟೈಲರ್ಸ್‌ಗಳಿಗೂ ಪಿಂಚಣಿಯನ್ನು ನೀಡಬೇಕು. ನಾವು ನಮ್ಮ ಹಕ್ಕುಗಳನ್ನು ಕೇಳುತ್ತಿದ್ದೇವೆ ಎಂದು ತಿಳಿಸಿದರು.

ಉಡುಪಿ ಕಾರ್ಮಿಕ ಅಧಿಕಾರಿ ಜೀವನ್ ಕುಮಾರ್ ಸ್ಮಾಟ್‌ಕಾರ್ಡ್ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಗುರುರಾಜ ಎಂ.ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಟೈಲರ್ಸ್‌ಗಳಿಗೆ ಸ್ಮಾಟ್ ಕಾರ್ಡ್‌ಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವಸಂತ, ರಾಜ್ಯ ಕೋಶಾಧಿಕಾರಿ ಅಬ್ದುಲ್ ಖಾದರ್, ಉದ್ಯಮಿ ಸುರೇಶ್, ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಟಿ.ಸಾಲ್ಯಾನ್, ಕೋಶಾಧಿಕಾರಿ ಸತೀಶ್ ಆರ್.ದೇವಾಡಿಗ ಶಿರ್ವ ಉಪಸ್ಥಿತರಿದ್ದರು.

ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಗಣೇಶ್ ಶೆಟ್ಟಿಗಾರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News