ಶಾಸಕರ ಬೆಂಬಲ ಪಡೆಯಲು ಕ್ರಿಮಿನಲ್‌ಗಳು, ಸರಕಾರಿ ಏಜೆನ್ಸಿಗಳ ಬಳಕೆಯಾಗುತ್ತಿದೆ: ಶಿವಸೇನೆ ನಾಯಕ ರಾವತ್

Update: 2019-11-03 14:12 GMT

ಮುಂಬೈ,ನ.3: ಮಹಾರಾಷ್ಟ್ರದಲ್ಲಿ ಸರಕಾರ ರಚನೆಗಾಗಿ ನಡೆಯುತ್ತಿರುವ ಡೊಂಬರಾಟದ ನಡುವೆಯೇ ಹಿರಿಯ ಶಿವಸೇನೆ ನಾಯಕ ಸಂಜಯ ರಾವತ್ ಅವರು, ಬೆಂಬಲವನ್ನು ನೀಡುವಂತೆ ನೂತನ ಶಾಸಕರನ್ನು ಬಲವಂತಗೊಳಿಸಲು ಕ್ರಿಮಿನಲ್ ಶಕ್ತಿಗಳು ಮತ್ತು ಸರಕಾರಿ ಏಜೆನ್ಸಿಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ರವಿವಾರ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಹುದ್ದೆಯ ಕುರಿತು ಮಾತ್ರವೇ ಶಿವಸೇನೆ ಮತ್ತು ಬಿಜೆಪಿ ನಡುವೆ ಮಾತುಕತೆ ನಡೆಯುತ್ತದೆ ಮತ್ತು ಅದು ನಡೆಯದಿದ್ದರೆ ನಾವು ಶಿವಸೇನೆಯ ಮುಖ್ಯಮಂತ್ರಿಗಳನ್ನು ಹೊಂದಲಿದ್ದೇವೆ ಎಂದ ಅವರು,ಶಿವಸೇನೆಯ ಮುಖ್ಯಮಂತ್ರಿಗಳು ದಾದರ್‌ನ ಶಿವಾಜಿ ಪಾರ್ಕ್‌ನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಲಿದ್ದಾರೆ ಮತ್ತು ತನ್ನ ಪಕ್ಷವು 170ಕ್ಕೂ ಅಧಿಕ ಶಾಸಕರ ಬೆಂಬಲವನ್ನು ಪಡೆಯಲಿದೆ ಎಂದರು.

ಚುನಾವಣಾ ಫಲಿತಾಂಶ ಪ್ರಕಟಗೊಂಡಾಗಿನಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಮೌನವನ್ನು ‘ನಿಗೂಢ’ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರಾವತ್ ಬಣ್ಣಿಸಿದರು.

ಶಾಸಕರಿಂದ ಬಲವಂತದಿಂದ ಬೆಂಬಲವನ್ನು ಪಡೆಯಲು ಕ್ರಿಮಿನಿಲ್ ಶಕ್ತಿಗಳು ಮತ್ತು ಸರಕಾರಿ ಏಜೆನ್ಸಿಗಳನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದನ್ನು ಶೀಘ್ರವೇ ಬಯಲುಗೊಳಿಸುವುದಾಗಿ ತಿಳಿಸಿದ ಅವರು,ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಗೆಸ್ಟ್ ಹೌಸ್‌ಗಳು,ವಾಂಖೆಡೆ ಸ್ಟೇಡಿಯಂ ಮತ್ತು ಮಹಾಲಕ್ಷ್ಮಿ ರೇಸ್‌ಕೋರ್ಸ್‌ನ್ನು ಕಾದಿರಿಸಲಾಗಿದೆ ಎಂಬ ಮಾಹಿತಿ ತನಗೆ ಲಭಿಸಿದೆ. ಆದರೆ ಬಿಜೆಪಿಯೇಕೆ ಇನ್ನೂ ಸರಕಾರ ರಚನೆಗೆ ಹಕ್ಕು ಮಂಡಿಸಿಲ್ಲ ಎಂದು ಪ್ರಶ್ನಿಸಿದರು.

 ಸರಕಾರ ರಚನೆಯ ‘ರಿಮೋಟ್ ಕಂಟ್ರೋಲ್’ ಈಗ ಶಿವಸೇನೆಯ ಬಳಿಯಿದೆಯೇ ಎಂಬ ಪ್ರಶ್ನೆಗೆ ಅವರು,ಇದು ಆಟವಲ್ಲ,ಆದರೆ ಶಿವಸೇನೆಯ ಪಾಲಿಗೆ ವಿಶ್ವಾಸದ,ಆತ್ಮಗೌರವದ ಮತ್ತು ಸತ್ಯದ ವಿಷಯವಾಗಿದೆ. ಮಹಾರಾಷ್ಟ್ರ ಎಂದಿಗೂ ಸುಳ್ಳುಗಳನ್ನು ಸಹಿಸಿಲ್ಲ. ಈಗಾಗಲೇ ನಿರ್ಧಾರವಾಗಿರುವುದನ್ನು ನೀವು (ಬಿಜೆಪಿ) ಒಪ್ಪಿಕೊಳ್ಳದಿದ್ದರೆ ಜನರೇ ನಿಮಗೆ ಪಾಠ ಕಲಿಸುತ್ತಾರೆ ಎಂದು ಉತ್ತರಿಸಿದರು.

ಶಾ ಮತ್ತು ಶಿವಸೇನೆ ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಒಟ್ಟಿಗೆ ಕುಳಿತು ಚರ್ಚಿಸಿದರೆ ಸರಕಾರ ರಚನೆ ಬಿಕ್ಕಟ್ಟನ್ನು ಬಗೆಹರಿಸಬಹುದು.ಆದರೆ ಶಾ ಅವರ ಮೌನ ನಿಗೂಢವಾಗಿದೆ. ಅವರು ನೇರ,ನಿಷ್ಠುರ ನಾಯಕರಾಗಿದ್ದು, ನಿರ್ಧಾರವಾಗಿದ್ದನ್ನು ಒಪ್ಪಿಕೊಳ್ಳುತ್ತಾರೆ. ಆದರೆ ಚುನಾವಣಾ ಫಲಿತಾಂಶ ಪ್ರಕಟಗೊಂಡ ಬಳಿಕ ಅವರು ಮಹಾರಾಷ್ಟ್ರದ ಬಗ್ಗೆ ಗಮನ ನೀಡಿಲ್ಲ ಎಂದು ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News