ಅಮಿತ್ ಶಾ ಪುತ್ರನ ವ್ಯವಹಾರವನ್ನು 15,000 ಶೇ. ದಷ್ಟು ಹೆಚ್ಚಿಸಿದ ವ್ಯವಹಾರ ಯಾವುದು ?: ಕಾಂಗ್ರೆಸ್ ಪ್ರಶ್ನೆ

Update: 2019-11-03 14:26 GMT

ಹೊಸದಿಲ್ಲಿ, ನ.3: ಕೇಂದ್ರ ಗೃಹಸಚಿವ ಅಮಿತ್ ಶಾರ ಪುತ್ರ ಜಯ್ ಶಾ ಮಾಲಕತ್ವದ ಸಂಸ್ಥೆಯ ಆದಾಯದಲ್ಲಿ ಗಣನೀಯ ಹೆಚ್ಚಳವಾಗಿದ್ದು, ಲೋಕಸಭೆ ಚುನಾವಣೆ ಮುಗಿಯುವವರೆಗೆ ಕಾದು ಬಳಿಕ ಅವರು ಸಂಸ್ಥೆಯ 2 ವರ್ಷದ ಲೆಕ್ಕಪತ್ರಗಳ ವಿವರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಜಯ್ ಶಾ ಮಾಲಕತ್ವದ ಕುಸುಮ್ ಫಿನ್‌ಸರ್ವ್ ಸಂಸ್ಥೆ 2014ರಲ್ಲಿ 79.60 ಲಕ್ಷ ರೂ. ಒಟ್ಟು ಆದಾಯ ದಾಖಲಿಸಿದ್ದರೆ 2019ರಲ್ಲಿ ಈ ಮೊತ್ತ 119.61 ಕೋಟಿ ರೂ.ಗೆ ಏರಿಕೆಯಾಗಿದೆ . ಈ ಮಾಹಿತಿ ಕಾರ್ಪೊರೇಟ್ ವ್ಯವಹಾರಗಳ ಇಲಾಖೆಯ ವೆಬ್‌ಸೈಟ್‌ಗೆ ಅಪ್‌ಲೋಡ್ ಆಗಿರುವ ಮಾಹಿತಿಯಿಂದ ಲಭ್ಯವಾಗಿದೆ ಎಂದು ಮಾಧ್ಯಮದಲ್ಲಿ ಶುಕ್ರವಾರ ವರದಿಯಾಗಿದೆ.

ಈ ಬಗ್ಗೆ ದಿಲ್ಲಿಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಪವನ್ ಖೇರ, ಜಯಂತ್ ಶಾರ ಸಂಸ್ಥೆ 2017 ಮತ್ತು 2018ರ ಸಾಲಿಗೆ ಲೆಕಪತ್ರಗಳ ವಿವರ ದಾಖಲಿಸಿಲ್ಲ. ನಮ್ಮ ನಿಮ್ಮಂತವರು ಹೀಗೆ ಮಾಡಿದರೆ ಇದು ಗಂಭೀರ ಅಪರಾಧ ಎಂದು ಪರಿಗಣಿಸಲ್ಪಟ್ಟು 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಆದರೆ ಈ ನಿಬಂಧ ಯುವರಾಜ ಜಯ್ ಅಮಿತ್ ಶಾರಿಗೆ ಅನ್ವಯಿಸುವುದಿಲ್ಲ. ಅವರು ಸಾರ್ವತ್ರಿಕ ಚುನಾವಣೆ ಮುಗಿಯುವವರೆಗೆ ಕಾದು ಕುಳಿತರು ಎಂದು ಹೇಳಿದ್ದಾರೆ.

2014ರಲ್ಲಿ ಸಂಸ್ಥೆಯ ಆದಾಯ 80 ಲಕ್ಷ ರೂ., 2019ರ ವೇಳೆಗೆ ಇದು 119.6 ಕೋಟಿ ರೂ.ಗೆ ತಲುಪಿದೆ. (2017ರಲ್ಲಿ 143 ಕೋಟಿ ರೂ.ಗೆ ತಲುಪಿತ್ತು). ಶಾ ‘ರಾಜವಂಶದ’ ಈ ಸಂಸ್ಥೆ ಯಾವ ವ್ಯವಹಾರ ಮಾಡುತ್ತಿದೆ ಎಂಬುದು ಯಾರಿಗೂ ತಿಳಿದಿಲ್ಲ. ಆದಾಯವನ್ನು 15000% ಹೆಚ್ಚಿಸಿದ ವ್ಯವಹಾರ ಯಾವುದು? ಎಂದವರು ಪ್ರಶ್ನಿಸಿದ್ದಾರೆ. ಈ ವಿಷಯವನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಎತ್ತಲಿದೆ ಎಂದವರು ಹೇಳಿದ್ದಾರೆ.

ಈ ವಿಷಯದ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಈಗ ಈ ಕತೆಯನ್ನು ಮುಗಿಸಲಾಗುತ್ತದೆ . ಕಾನ್‌ಪಟ್ಟಿ ಪೆ ಗನ್ ಲಗಾ ಕರ್’ ಎಂದು ಟ್ವೀಟ್ ಮಾಡಿದ್ದಾರೆ. ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾರ ಬಂಧನದ ಕುರಿತು ಆಗಸ್ಟ್‌ನಲ್ಲಿ ಸಂಸತ್ತಿನಲ್ಲಿ ಎತ್ತಿದ ಪ್ರಶ್ನೆಗೆ ಉತ್ತರಿಸಿದ್ದ ಗೃಹ ಸಚಿವ ಅಮಿತ್ ಶಾ, ಅವರನ್ನು ಬಂಧಿಸಿಲ್ಲ, ಎಲ್ಲಿಗೆ ಬೇಕಾದರೂ ಹೋಗಲು ಸ್ವತಂತ್ರರಾಗಿದ್ದಾರೆ. ಅವರನ್ನು ತಲೆಗೆ ಗನ್ ಹಿಡಿದು (ಕಾನ್‌ಪಟ್ಟಿ ಪೆ ಗನ್ ಲಗಾ ಕರ್) ಇಲ್ಲಿಗೆ ಕರೆತರಲು ನಮಗೆ ಸಾಧ್ಯವಿಲ್ಲ ಎಂದಿದ್ದರು. ಈ ಹೇಳಿಕೆಯನ್ನು ರಾಹುಲ್ ವ್ಯಂಗ್ಯವಾಗಿ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News