ಮಾಲಿ: 49 ಯೋಧರ ಹತ್ಯಾಕಾಂಡದ ಹೊಣೆ ಹೊತ್ತ ಐಸಿಸ್

Update: 2019-11-03 15:54 GMT

ವಾಶಿಂಗ್ಟನ್,ನ.3: ಆಫ್ರಿಕನ್ ರಾಷ್ಟ್ರವಾದ ಮಾಲಿಯಲ್ಲಿ 49 ಯೋಧರ ಹತ್ಯೆಗೆ ಕಾರಣವಾದ ಭೀಕರ ದಾಳಿ ಯ ಹೊಣೆಯನ್ನು ಐಸಿಸ್ ಭಯೋತ್ಪಾದಕ ಗುಂಪು ವಹಿಸಿಕೊಂಡಿದೆ. ಓರ್ವ ಫ್ರೆಂಚ್ ಸೈನಿಕನನ್ನು ಬಲಿತೆಗೆದುಕೊಂಡ ಬಾಂಬ್ ಸ್ಪೋಟ ಕೂಡಾ ತನ್ನ ಕೃತ್ಯವೆಂದು ಅದು ಹೇಳಿಕೊಂಡಿದೆ.

 ನೈಜರ್ ಗಡಿಗೆ ತಾಗಿಕೊಂಡಿರುವ ಪೂರ್ವ ಮೆನಕಾ ಪ್ರಾಂತದಲ್ಲಿ ಮಾಲಿ ಸೇನೆಯ ಹೊರಠಾಣೆಯಲ್ಲಿ ಶುಕ್ರವಾರ ನೆಲಬಾಂಬೊಂದು ಸ್ಪೋಟಿಸಿ 49 ಮಾಲಿ ಯೋಧರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದರು ಹಾಗೂ ಇತರ 20 ಮಂದಿ ಗಾಯಗೊಂಡಿದ್ದರು.

 ಐಸಿಸ್ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಇಂದು ನೀಡಿದ ಹೇಳಿಕೆಯೊಂದರಲ್ಲಿ ತನ್ನ ಯೋಧರು ಗ್ರಾಮವೊಂದರಲ್ಲಿ ನಿಯೋಜಿತವಾಗಿದ್ದ ಮಾಲಿಯ ಸೇನಾನೆಲೆಯ ಮೇಲೆ ದಾಳಿ ನಡೆಸಿದ್ದಾರೆ’’ ಎಂದು ಹೇಳಿಕೊಂಡಿತ್ತು.

 ಶನಿವಾರ ಮಾಲಿಯ ಮೆನಕಾ ನಗರದ ಸಮೀಪ ಐಇಡಿ ಸ್ಫೋಟಕ್ಕೆ ಸೇನಾ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ಫ್ರೆಂಚ್ ಕಾರ್ಪೊರಲ್ ಯೋಧ ರೊನಾನ್ ಪಾಯಿಂಟಾವ್ ಎಂಬಾತ ಮೃತಪಟ್ಟಿದ್ದಾನೆ ಎಂದು ಫ್ರೆಂಚ್ ರಕ್ಷಣಾ ಸಚಿವಾಲಯದ ಹೇಳಿಕೆಯು ತಿಳಿಸಿದೆ. ಈ ಕೃತ್ಯದ ಹೊಣೆಯನ್ನು ಕೂಡಾ ಐಸಿಸ್ ವಹಿಸಿಕೊಂಡಿದೆ. ರೊನಾನ್ ಪಾಯಿಂಟಾವ್ ಹಾಗೂ ಆತನ ಸಹಯೋಧರು ಗಾವೊ ಹಾಗೂ ಮೆನಕಾ ನಗರಗಳ ನಡುವೆ ಸೇನಾವಾಹನಕ್ಕೆ ಬೆಂಗಾವಲಾಗಿ ಪ್ರಯಾಣಿಸುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆಯೆಂದು ತಿಳಿದುಬಂದಿದೆ.

  2012ರಲ್ಲಿ ಉತ್ತರ ಮಾಲಿಯಲ್ಲಿ ಭುಗಿಲೆದ್ದ ಬಂಡಾಯವನ್ನು ಮಾಲಿಯ ಸೇನೆಯು ಸದೆಬಡಿಯಲು ವಿಫಲವಾದ ಆನಂತರ ಆ ಪ್ರದೇಶವನ್ನು ಅಲ್‌ಖಾಯಿದಾ ಜೊತೆ ನಂಟು ಹೊಂದಿರುವ ಉಗ್ರರು ತಮ್ಮ ನಿಯಂತ್ರಣಕ್ಕೆ ಪಡೆದುಕೊಂಡಿದ್ದರು. ಈ ಉಗ್ರರ ವಿರುದ್ಧ ಫ್ರಾನ್ಸ್ ನೇತೃತ್ವದಲ್ಲಿ ಸೇನಾ ಕಾರ್ಯಾಚರಣೆ ಆರಂಭಗೊಂಡಿದ್ದು, ಸುಮಾರು ಒಂದು ವರ್ಷದ ಬಳಿಕ ಉಗ್ರರನ್ನು ಹಿಮ್ಮೆಟ್ಟಿಸಲು ಸಾಧ್ಯವಾಯಿತು. ಆದರೆ ಕೇಂದ್ರ ಹಾಗೂ ದಕ್ಷಿಣ ಮಾಲಿಯಲ್ಲಿ ಬಂಡುಕೋರ ಉಗ್ರರು ಪುನರ್‌ ಸಂಘಟಿತರಾಗುತ್ತಿದ್ದು. ಸೇನಾಪಡೆಗಳ ಮೇಲೆ ಮಿಂಚಿನ ದಾಳಿ ನಡೆಸಿ ಪರಾರಿಯಾಗುತ್ತಿದ್ದಾರೆ ಹಾಗೂ ನೆಲಬಾಂಬ್ ಸ್ಫೋಟಗಳನ್ನು ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News