ಫಝ್ಲರ್ರಹ್ಮಾನ್ ವಿರುದ್ಧ ದಂಗೆ ಪ್ರಕರಣ ದಾಖಲಿಸಲು ಪಾಕ್ ನಿರ್ಧಾರ

Update: 2019-11-03 15:59 GMT

   ಇಸ್ಲಾಮಾಬಾದ್,ನ.3: ಪ್ರಧಾನಿ ಇಮ್ರಾನ್ ಖಾನ್ ಹಾಗೂ ಸರಕಾರಿ ಸಂಸ್ಥೆಗಳ ವಿರುದ್ಧ ಜನತೆಯನ್ನು ಪ್ರಚೋದಿಸಿದ ಹಾಗೂ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಆರೋಪದಲ್ಲಿ ಪಾಕಿಸ್ತಾನದ ಜಮಿಯತ್ ಉಲೇಮಾ ಇ ಇಸ್ಲಾಮ್ ಫಝ್ಲಾ (ಜೆಯುಐ-ಎಫ್) ವರಿಷ್ಠ ಮೌಲಾನಾ ಫಝ್ಲುರ್ರಹ್ಮಾನ್ ವಿರುದ್ಧ ದಂಗೆಯ ಪ್ರಕರಣವನ್ನು ದಾಖಲಿಸಲು ಪಾಕ್ ಸರಕಾರ ನಿರ್ಧರಿಸಿದೆ.

  ಸರಕಾರದ ಸಂಧಾನ ಸಮಿತಿಯ ಸದಸ್ಯರೊಂದಿಗೆ ಶನಿವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ರಕ್ಷಣಾ ಸಚಿವ ಫರ್ವೇಝ್ ಖಟ್ಟಕ್ ಅವರು, ಸಾರ್ವಜನಿಕರನ್ನು ದಂಗೆಯೇಳಲು ಪ್ರಚೋದಿಸಿದ ಹಾಗೂ ಇಮ್ರಾನ್ ಖಾನ್ ಅವರನ್ನು ಬಂಧಿಸುವಂತೆ ಕರೆ ನೀಡಿದ ಆರೋಪದಲ್ಲಿ ಫಝ್ಲುರ್ ವಿರುದ್ಧ ನ್ಯಾಯಾಲಯದ ಮೆಟ್ಟಲೇರಲು ನಿರ್ಧರಿಸಿದೆ ಎಂದು ಹೇಳಿದ್ದಾರೆಂದು ಡಾನ್ ಸುದ್ದಿಸಂಸ್ಥೆಯ ವರದಿ ತಿಳಿಸಿದೆ.

ಸರಕಾರಿ ವಿರೋಧಿ ಆಝಾದಿ ಮಾರ್ಚ್‌ನ ನೇತೃತ್ವ ವಹಿಸಿರುವ ತೀವ್ರವಾದಿ ಧಾರ್ಮಿಕ ನಾಯಕ ರಹ್ಮಾನ್ ಅವರು ಶುಕ್ರವಾರ ಇಸ್ಲಾಮಾಬಾದ್‌ನಲ್ಲಿ ನಡೆದ ಪ್ರತಿಪಕ್ಷಗಳ ರ್ಯಾಲಿಯ ಸಮಾರೋಪ ಸಭೆಯಲ್ಲಿ ಅಧಿಕಾರದಿಂದ ಕೆಳಗಿಳಿಯಲು ಇಮ್ರಾನ್ ಖಾನ್‌ಗೆ ಎರಡು ದಿನಗಳ ಗಡುವು ನೀಡಿದ್ದರು. ಒಂದು ವೇಳೆ ಇಮ್ರಾನ್ ರಾಜೀನಾಮೆ ನೀಡದೆ ಇದ್ದಲ್ಲಿ ಜನರು ಪ್ರಧಾನಿಯನ್ನು ಸ್ವಗೃಹದಲ್ಲಿ ಬಂಧಿಸಿಡಬೇಕು ಹಾಗೂ ರಾಜೀನಾಮೆ ನೀಡುವಂತೆ ಬಲವಂತ ಪಡಿಸಬೇಕೆಂದು ಕರೆ ನೀಡಿದ್ದರು.

ಪ್ರತಿಪಕ್ಷಗಳ ಆಝಾದಿ ನಡಿಗೆ ಬಗ್ಗೆ ಸರಕಾರವು ಕಳವಳಗೊಂಡಿಲ್ಲವೆಂದ ರಕ್ಷಣಾ ಸಚಿವರು ಸ್ಪಷ್ಟಪಡಿಸಿದ್ದರು. ಆದರೆ ಪ್ರತಿಪಕ್ಷಗಳ ನಾಯಕರು ರಾಷ್ಟ್ರೀಯ ಸಂಸ್ಥೆಗಳಿಗೆ ಕಳಂಕ ಹಚ್ಚಲು ಮುಂದಾಗಿರುವುದು ದುರದೃಷ್ಟಕರವೆಂದು ಹೇಳಿದರು.

  ದೇಶಕ್ಕಾಗಿ ತ್ಯಾಗಗಳನ್ನು ಮಾಡಿರುವ ಸರಕಾರದ ಸಂಸ್ಥೆಗಳ ವಿರುದ್ಧ ಪ್ರಚೋದನಕಾರಿ ಭಾಷಣಗಳನ್ನು ಮಾಡುವುದು ದೇಶ ವಿರೋಧಿ ಕೃತ್ಯಕ್ಕೆ ಸಮನವಾದುದಾಗಿದೆಯೆಂದು ಖಟ್ಟಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News