ಉತ್ತರ ಸಿರಿಯದಲ್ಲಿ ಕಾರ್‌ಬಾಂಬ್ ಸ್ಫೋಟ: ಕನಿಷ್ಠ 13 ಮಂದಿ ಬಲಿ

Update: 2019-11-03 16:03 GMT

  ಇಸ್ತಾಂಬುಲ್,ನ.2: ಟರ್ಕಿಗೆ ತಾಗಿಕೊಂಡಿರುವ ಉತ್ತರ ಸಿರಿಯದ ಗಡಿ ಸಮೀಪದ ಪಟ್ಟಣವೊಂದರಲ್ಲಿ ಕಾರ್ ಬಾಂಬೊಂದು ಸ್ಫೋಟಿಸಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆಂದು ಟರ್ಕಿಯ ರಕ್ಷಣಾ ಸಚಿವಾಲಯವು ತಿಳಿಸಿದೆ.

ತಾಲ್ ಅಬ್ಯಾದ್ ಪಟ್ಟಣದಲ್ಲಿ ಈ ಕಾರ್ ಬಾಂಬ್ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ ಇತರ 20 ಮಂದಿ ಗಾಯಗೊಂಡಿದ್ದಾರೆಂದು ಅದು ಹೇಳಿದೆ. ತಾಲ್ ಆಬ್ಯಾದ್ ಪಟ್ಟಣವನ್ನು ಕಳೆದ ತಿಂಗಳು ಟರ್ಕಿ ಬೆಂಬಲಿತ ಬಂಡುಕೋರ ಗುಂಪುಗಳು ಖುರ್ದಿಶ್ ಹೋರಾಟಗಾರರಿಂದ ಕಿತ್ತುಕೊಂಡಿದ್ದರು. ಶನಿವಾರ ನಡೆದ ಕಾರ್‌ ಬಾಂಬ್ ಸ್ಫೋಟದ ಹಿಂದೆ ಕುರ್ದಿಶ್ ಬಂಡುಕೋರರ ಕೈವಾಡವಿದೆಯೆಂದು ಟರ್ಕಿಯು ಆಪಾದಿಸಿದೆ. ಆದರೆ ಈ ದಾಳಿಯ ಹೊಣೆಯನ್ನು ಈ ತನಕ ಯಾವುದೇ ಗುಂಪು ವಹಿಸಿಕೊಂಡಿಲ್ಲ.

  ಕುರ್ದಿಶ್ ಹೋರಾಟಗಾರರನ್ನು ಹೊರದಬ್ಬಲು ಟರ್ಕಿಯು ಕಳೆದ ತಿಂಗಳು ಉತ್ತರ ಸಿರಿಯದ ಮೇಲೆ ಆಕ್ರಮಣ ನಡೆಸಿತ್ತು

ಟರ್ಕಿ ಬೆಂಬಲಿತ ಬಂಡುಕೋರ ಗುಂಪುಗಳು ಕಳೆದ ತಿಂಗಳಿಂದ ಉತ್ತರ ಸಿರಿಯದಲ್ಲಿ ಮುನ್ನುಗ್ಗುತ್ತಿರುವುದರಿಂದ 2 ಲಕ್ಷಕ್ಕೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News