ಬರಹ ರೂಪದ ಹಾಸ್ಯ ಸಾಹಿತ್ಯದ ಕೊರತೆ: ಡಾ.ಮಹಾಬಲೇಶ್ವರ ರಾವ್
ಉಡುಪಿ, ನ.3: ಕನ್ನಡ ಭಾಷೆಯಲ್ಲಿ ಇಂದು ಬರಹ ರೂಪದ ಹಾಸ್ಯ ಸಾಹಿತ್ಯಕ್ಕೆ ಕೊರತೆ ಎದುರಾಗಿದ್ದು, ಹಾಸ್ಯ ಸಾಹಿತಿಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಕುಂಜಿಬೆಟ್ಟು ಡಾ.ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ ಹಾಗೂ ಲೇಖಕ ಡಾ.ಮಹಾಬಲೇಶ್ವರ ರಾವ್ ಹೇಳಿದ್ದಾರೆ.
ಉಡುಪಿ ಸುಹಾಸಂ ಆಶ್ರಯದಲ್ಲಿ ಉಡುಪಿ ಕಿದಿಯೂರು ಹೊಟೇಲಿನ ಸಭಾಂಗಣದಲ್ಲಿ ರವಿವಾರ ಆಯೋಜಿಸಲಾದ ಎಚ್.ಶಾಂತರಾಜ ಐತಾಳ್ ಅವರ ಆಯುಬೊವಾನ್ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಹಾಸ್ಯ ಬರಹ ಎಂಬುದು ವ್ಯಾಖ್ಯಾನುಗಳ ಸರಮಾಲೆಯೇ ಹೊರತು ಸರಪ್ರಸಂಗಗಳ ಜೋಡಣೆ ಅಲ್ಲ. ಹಾಸ್ಯದಿಂದ ಜೀವನ ದರ್ಶನ ಲಭ್ಯ ಆಗ ಬೇಕು. ಆದರೆ ಇಂದು ಜನರಿಗೆ ಹಾಸ್ಯ ಲೇಖನವನ್ನು ಓದಿ ಸವಿಯುವ ಮನೋ ್ರವೃತ್ತಿ ಕಡಿಮೆ ಆಗುತ್ತಿದೆ ಎಂದರು
ಇಂದು ಜನರು ಸುಲಭವಾಗಿ ಕಣ್ಣಿಗೆ ಹಿತವನ್ನುಂಟು ಮಾಡುವ ಹಾಗೂ ಕಿವಿಗೆ ಕೇಳುವ ರಸಾನುಭವವನ್ನು ನೀಡುವ ಹಾಸ್ಯಕ್ಕೆ ಹೆಚ್ಚು ಪ್ರಾಧಾನ್ಯತೆಯನ್ನು ನೀಡುತ್ತಿದ್ದಾರೆ. ಹಾಸ್ಯದ ಮೂಲಕ ವ್ಯಂಗ್ಯವಾಗಿ ಬದುಕಿನ ದುರಂತ, ವೈಚಿತ್ರ, ಅನನ್ಯತೆಗಳನ್ನು ಕಟ್ಟಿಕೊಡುವ ಪ್ರಯತ್ನ ಹಾಗೂ ಜೀವನ ದರ್ಶನವನ್ನು ಒದಗಿಸುವ ಪರಿ ಕನ್ನಡದಲ್ಲಿ ಕಡಿಮೆ ಆಗಿದೆ ಎಂದು ಅವರು ತಿಳಿಸಿದರು.
ಹಾಸ್ಯ ಲೇಖಕರಿಗೆ ಸಾಕಷ್ಟು ಅವಕಾಶಗಳಿವೆ. ಆದರೆ ಬರೆಯುವವರ ಸಂಖ್ಯೆ ಕಡಿಮೆ ಆಗಿದೆ. ಗುಣಮಟ್ಟದಿಂದ ಕೂಡಿದ ಹಾಸ್ಯ ಬರಹಗಳು ಇಂದು ಪ್ರಕಟ ಗೊಳ್ಳುತ್ತಿಲ್ಲ. ಓದುವ ಸಾಹಿತ್ಯಕ್ಕಿಂತ ನೋಡುವ, ಕೇಳುವ ಸಾಹಿತ್ಯವೇ ಪ್ರಧಾನ ಆಗಿಬಿಟ್ಟಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಕೃತಿಯನ್ನು ಬೆಂಗಳೂರು ಹಾಸ್ಯ ತರಂಗ ಕಲಾಸಂಸ್ಥೆಯ ಅಧ್ಯಕ್ಷ ಪ್ರೊ.ಎಸ್. ಎಸ್.ಪಡಶೆಟ್ಟಿ ಬಿಡುಗಡೆಗೊಳಿಸಿದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ, ಸುಹಾಸಂ ಸಂಸ್ಥೆಯ ಕಾರ್ಯದರ್ಶಿ ಎ್. ಗೋಪಾಲ ಭಟ್ ಉಪಸ್ಥಿತರಿದ್ದರು.
ಲೇಖಕ ಹಾಗೂ ಸುಹಾಸಂ ಅಧ್ಯಕ್ಷ ಶಾಂತರಾಜ ಐತಾಳ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀನಿವಾಸ ಉಪಾಧ್ಯ ಕಾರ್ಯಕ್ರಮ ನಿರೂಪಿಸಿದರು.