×
Ad

ಹಿರಿಯಡ್ಕ ಪುತ್ತಿಗೆ ಪರಿಸರದಲ್ಲಿ ಚಿರತೆ: ಸ್ಥಳೀಯರಲ್ಲಿ ಆತಂಕ

Update: 2019-11-03 21:56 IST

ಹಿರಿಯಡ್ಕ, ನ.3: ಹಿರಿಯಡ್ಕ ಸಮೀಪದ ಪುತ್ತಿಗೆ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ರಾತ್ರಿ ವೇಳೆ ಚಿರತೆಯೊಂದು ತಿರುಗಾಡುತ್ತಿದ್ದು, ಈ ಕುರಿತ ದೃಶ್ಯಾವಳಿ ಸ್ಥಳೀಯ ಮನೆಯೊಂದಕ್ಕೆ ಆಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶುಕ್ರವಾರ ರಾತ್ರಿ ವೇಳೆ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಪುತ್ತಿಗೆಯ ರಶೀದ್ ಎಂಬವರ ಮನೆಯ ಗೇಟ್ ಹಾರಿಕೊಂಡು ಸಿಟ್‌ಔಟ್‌ಗೆ ನುಗ್ಗಿದ ಚಿರತೆ, ಮನೆಯ ಮುಖ್ಯದ್ವಾರದ ಎದುರು ಕುಳಿತು ಕೊಂಡಿರುವುದು ಕಂಡು ಬಂದಿದೆ.

ಎರಡನೆ ದಿನವಾದ ಶನಿವಾರವೂ ಮನೆಯ ದ್ವಾರದವರೆಗೆ ಬಂದ ಚಿರತೆ, ಅಲ್ಲೇ ಸಮೀಪದ ಗೂಡಿನಲ್ಲಿ ಇರಿಸಿದ್ದ ಕೋಳಿಯೊಂದನ್ನು ಬಾಯಿಯಲ್ಲಿ ಕಚ್ಚಿ ತೆಗೆದುಕೊಂಡು ಹೋಗಿದೆ. ಈ ದೃಶ್ಯಾವಳಿಗಳು ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದರಿಂದ ಸ್ಥಳೀಯರು ರಾತ್ರಿ ವೇಳೆ ತಿರುಗಾಡಲು ಭಯ ಪಡುವಂತಾಗಿದೆ. ಈ ಪರಿಸರದಲ್ಲಿ ಸುಮಾರು 15 ಮನೆಗಳಿದ್ದು, ಇಲ್ಲಿನ ಮನೆಮಂದಿ ಆತಂಕಕ್ಕೆ ಒಳಗಾಗಿದ್ದಾರೆ. ಆರು ತಿಂಗಳ ಹಿಂದೆ ಕೂಡ ಇದೇ ರೀತಿ ಚಿರತೆ ಈ ಪರಿಸರದಲ್ಲಿ ತಿರುಗಾಡಿರುವುದು ರಶೀದ್ ಮನೆಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

ಚಿರತೆ ಕುರಿತು ಹೆಬ್ರಿ ವಲಯ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ನ.4ರಂದು ಪುತ್ತಿಗೆ ಪರಿಸರದಲ್ಲಿ ಬೋನು ಇಟ್ಟು ಚಿರತೆಯನ್ನು ಸೆರೆ ಹಿಡಿಯುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ನ. 2ರಂದು ಮಧ್ಯರಾತ್ರಿ ವೇಳೆ ಪುತ್ತಿಗೆ ಸೇತುವೆ ಬಳಿ ಎರಡು ಚಿರತೆಗಳು ತಿರುಗಾಡುತ್ತಿರುವುದನ್ನು ಸ್ಥಳೀಯರು ನೋಡಿದ್ದಾರೆ ಎಂದು ರಶೀದ್ ಮಾಹಿತಿ ನೀಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News