ಬಸ್ಸಿನಿಂದ ಬಿದ್ದು ಅಂಗನವಾಡಿ ಕಾರ್ಯಕರ್ತೆ ಮೃತ್ಯು
ಅಜೆಕಾರು, ನ.3: ಚಾಲಕ ಬಸ್ಸನ್ನು ಒಮ್ಮೆಲೇ ನಿಲ್ಲಿಸಿದ ಪರಿಣಾಮ ಬಸ್ಸಿನ ಮೆಟ್ಟಿಲಿನಿಂದ ಕೆಳಗೆ ರಸ್ತೆಗೆ ಬಿದ್ದು ಅಂಗನವಾಡಿ ಕಾರ್ಯಕರ್ತೆ ಯೊಬ್ಬರು ಮೃತ ಪಟ್ಟ ಘಟನೆ ನ.2ರಂದು ಬೆಳಗ್ಗೆ 10.45ರ ಸುಮಾರಿಗೆ ಕಾಡುಹೊಳೆ ಎಂಬಲ್ಲಿ ನಡೆದಿದೆ.
ಮೃತರನ್ನು ಮರ್ಣೆ ಗ್ರಾಮದ ಗುಡ್ಡೆಯಂಗಡಿ ನಿವಾಸಿ ರಾಧಾಕೃಷ್ಣ ಶೆಟ್ಟಿ ಎಂಬವರ ಪತ್ನಿ ಗುಣಪಮ ಶೆಟ್ಟಿ(52) ಎಂದು ಗುರುತಿಸಲಾಗಿದೆ. ಕಾಡುಹೊಳೆ ಅಂಗನವಾಡಿ ಕಾರ್ಯಕರ್ತೆಯರಾಗಿರುವ ಇವರು ಮುನಿಯಾಲುವಿನಿಂದ ಎಸ್‌ಎನ್‌ಡಿಪಿ ಖಾಸಗಿ ಬಸ್‌ನಲ್ಲಿ ಮನೆಗೆ ಹೊರಟಿದ್ದರು.
ಈ ಮಧ್ಯೆ ಅವರು ಕಾಡುಹೊಳೆಯಲ್ಲಿ ಇಳಿಯುವುದಾಗಿ ನಿರ್ವಾಹಕರಲ್ಲಿ ತಿಳಿಸಿ ಬಸ್ಸಿನ ಬಾಗಿಲಿನ ಬಳಿ ಬಂದು ನಿಂತಿದ್ದರು. ಆಗ ಚಾಲಕ ಬಸ್ಸನ್ನು ಒಮ್ಮೆಲೇ ನಿಲ್ಲಿಸಿದ ಪರಿಣಾಮ ಗುಣಪಮ ಶೆಟ್ಟಿ ಬಸ್ಸಿನ ಮೆಟ್ಟಿಲಿನಿಂದ ಕೆಳಗೆ ರಸ್ತೆಗೆ ಬಿದ್ದರು. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.