ಉದ್ಯೋಗವಿಲ್ಲದೆ ಇನ್ನಿಬ್ಬರು ನಿರ್ಮಾಣ ಕಾರ್ಮಿಕರು ಆತ್ಮಹತ್ಯೆ

Update: 2019-11-03 16:39 GMT

 ಹೈದರಾಬಾದ್, ನ. 4: ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಇಬ್ಬರು ನಿರ್ಮಾಣ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಇಬ್ಬರು ನಿರ್ಮಾಣ ಕಾರ್ಮಿಕರ ಆತ್ಮಹತ್ಯೆಗೆ ಕಾರಣವನ್ನು ಪೊಲೀಸರು ಇದುವರೆಗೆ ಪತ್ತೆ ಮಾಡಿಲ್ಲ. ಮರಳಿನ ಕೊರತೆಯಿಂದ ರಾಜ್ಯದಲ್ಲಿ ನಿರ್ಮಾಣ ವಲಯದಲ್ಲಿನ ಉದ್ಯೋಗ ಕುಸಿತದಿಂದ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ಸಹಿತ ಕೆಲವರು ಆರೋಪಿಸುತ್ತಿದ್ದಾರೆ.

ವುಂಡವಲ್ಲಿ ಗ್ರಾಮದ ಗುರ್ರಾಮ್ ನಾಗರಾಜು (35), ಪೊನ್ನುರು ಪಟ್ಟಣದ ಅಡಪಾ ರವಿ (30) ಶನಿವಾರ ಬೆಳಗ್ಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

‘‘ಇನ್ನಿಬ್ಬರು ಕಾರ್ಮಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ವೈಎಸ್‌ಆರ್‌ಸಿ ಸರಕಾರ ಈ ಸಾವಿನ ಬಗ್ಗೆ ತಮಾಷೆ ಮಾಡುತ್ತಿದೆ. ಅವರು ನಿದ್ರೆಯಿಂದ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಕಾರ್ಮಿಕರು ಆತ್ಮಹತ್ಯೆ ಮಾಡಿಕೊಳ್ಳಬೇಕು’’ ಎಂದು ಟಿಡಿಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಟ್ವೀಟ್ ಮಾಡಿದ್ದಾರೆ.

ವಿಪಕ್ಷಗಳ ಆರೋಪ ನಿರಾಕರಿಸಿರುವ ರಾಜ್ಯ ನೀರಾವರಿ ಸಚಿವ ಅನಿಲ್ ಕುಮಾರ್ ಯಾದವ್, ನೆರೆಯ ಕಾರಣಕ್ಕೆ ರಾಜ್ಯದಲ್ಲಿ ಮರಳು ಕೊರತೆ ಉಂಟಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News