ಸಾವಿರಾರು ಹಣತೆಗಳ ದೀಪಗಳಿಂದ ವಿಶ್ವ ರೂಪದರ್ಶನ
ಉಡುಪಿ, ನ.3: ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಕಾರ್ತಿಕ ಮಾಸದ ಅಂಗವಾಗಿ ಇಂದು ಮುಂಜಾನೆ 5ಗಂಟೆಗೆ ಪಶ್ಚಿಮ ಜಾಗರ ಪೂಜೆ, ಸುಪ್ರಭಾತ, ಕಾಕಡ ಆರತಿ, ಶ್ರೀದೇವರ ಸನ್ನಿಧಿಯಲ್ಲಿ ಸಾವಿರಾರು ಹಣತೆಗಳ ದೀಪಗಳಿಂದ ಅಲಂಕೃತವಾದ ವಿಶ್ವ ರೂಪದರ್ಶನ ನೆರವೇರಿಸಲಾಯಿತು.
ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಗಣಪತಿ ಅವತಾರ, ತಿರುಮಲ ಬೆಟ್ಟದ ಶ್ರೀನಿವಾಸ ದರ್ಶನ, ಮಹಾಗಣಪತಿ, ಕಡಗೋಲು ಕೃಷ್ಣ, ಪಾಂಡುರಂಗ ವಿಠ್ಠಲ, ರಂಗೋಲಿಯ ಚಿತ್ತಾರ, ಹೂಗಳಿಂದ ರಚಿಸಿದ ರಂಗೋಲಿಯಲ್ಲಿ ಮೂಡಿಬಂದ ನವಿಲಾ ನರ್ತನ, ಹಣತೆಯ ದೀಪದಿಂದ ಓಂ, ಸ್ವಸ್ತಿಕ್, ಶಂಖ ಚಕ್ರಗಳನ್ನು ರಚಿಸಲಾಯಿತು.
ಪ್ರಧಾನ ಅರ್ಚಕ ವಿನಾಯಕ ಭಟ್ ಪೂಜಾ ಕಾರ್ಯಕ್ರಮ ನೆರವೇರಿಸಿ ದರು. ನೂರಾರು ಭಕ್ತರು ಸರತಿ ಸಾಲಿನಲ್ಲಿ ಬಂದು ಶ್ರೀದೇವರ ದರ್ಶನ ಪಡೆದರು. ದೇವರಿಗೆ ವಿಶೇಷ ಅಲಂಕಾರ ಹಾಗೂ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.
ಆಡಳಿತ ಮೊಕ್ತೇಸರರಾದ ಪಿ.ವಿ.ಶೆಣೈ, ಆಡಳಿತ ಮಂಡಳಿ ಸದಸ್ಯರಾದ ಗಣೇಶ್ ಕಿಣಿ, ರೋಹಿತಾಕ್ಷ ಪಡಿಯಾರ್, ವಸಂತ್ ಕಿಣಿ, ವಿಶ್ವನಾಥ್ ಭಟ್, ನಾರಾಯಣ ಪ್ರಭು, ಪುಂಡಲೀಕ ಕಾಮತ್, ನರಹರಿ ಶೆಣೈ, ವಿಶಾಲ್ ಶೆಣೈ, ಮಟ್ಟಾರ್ ಗಣೇಶ್ ಕಿಣಿ, ಭಾಸ್ಕರ್ ಶೆಣೈ, ಶ್ಯಾಂಪ್ರಸಾದ್ ಕುಡ್ವ, ಪ್ರದೀಪ್ ರಾವ್, ಮಟ್ಟಾರ್ ಸತೀಶ್ ಕಿಣಿ, ಸುರೇಶ ಭಟ್ ಮೊದಲಾದವರು ಉಪಸ್ಥಿತರಿದ್ದರು.