ನಿರಾಶ್ರಿತರ ಮಿತಿಯನ್ನು 18 ಸಾವಿರಕ್ಕಿಳಿಸಿದ ಅಮೆರಿಕ

Update: 2019-11-03 16:58 GMT

ವಾಶಿಂಗ್ಟನ್,ನ.3: ತನ್ನ ನೆಲದಲ್ಲಿ ಆಶ್ರಯ ನೀಡಲಾಗುವ ನಿರಾಶ್ರಿತರ ಸಂಖ್ಯೆಯಲ್ಲಿ ಅಮೆರಿಕವು ಗಣನೀಯ ಕಡಿತ ಮಾಡಿದೆ. 2020ರ ಹಣಕಾಸು ವರ್ಷದಲ್ಲಿ 18 ಸಾವಿರಕ್ಕಿಂತ ಹೆಚ್ಚು ನಿರಾಶ್ರಿತರನ್ನು ತೆಗೆದುಕೊಳ್ಳದಿರುವ ಯೋಜನೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಸಹಿಹಾಕಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ನಿರಾಶ್ರಿತರ ಸಂಖ್ಯೆಯಲ್ಲಿ ಗಣನೀಯ ಕಡಿತ ಮಾಡುವ ಯೋಜನೆಯನ್ನು ಅಮೆರಿಕದ ವಿದೇಶಾಂಗ ಇಲಾಖೆಯು ಪ್ರಕಟಿಸಿದಾಗ ಅದನ್ನು ವಿವಿಧ ಧಾರ್ಮಿಕ ಹಾಗೂ ಮಾನವೀಯ ನೆರವಿನ ಸಂಘಟನೆಗಳು ಬಲವಾಗಿ ವಿರೋಧಿಸಿದ್ದವು.

   ಒಬಾಮ ಆಡಳಿತದ ಕೊನೆಯ ವರ್ಷ ಅಮೆರಿಕದಲ್ಲಿ ನಿರಾಶ್ರಿತರ ಮಿತಿಯನ್ನು 85 ಸಾವಿರಕ್ಕೆ ನಿಗದಿಪಡಿಸಲಾಗಿತ್ತು. 2019ರಲ್ಲಿ ಟ್ರಂಪ್ ಆಡಳಿತವು ಈ ಮಿತಿಯನ್ನು 30 ಸಾವಿರಕ್ಕೆ ಇಳಿಸಿತ್ತು. ಇದೀಗ 2020ರಲ್ಲಿ ನಿರಾಶ್ರಿತರ ಸಂಖ್ಯೆಯನ್ನು 18 ಸಾವಿರಕ್ಕೆ ಇಳಿಸಿರುವುದು, 1980ರಲ್ಲಿ ನಿರಾಶ್ರಿತ ಪುನರ್ವಸತಿ ಕುರಿತ ನವೀನ ಯೋಜನೆ ರೂಪುಗೊಂಡ ಆನಂತರದ ವರ್ಷಗಳಲ್ಲೇ ಅತ್ಯಂತ ಕನಿಷ್ಠವಾದುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News