×
Ad

ದ.ಕ.ಜಿಲ್ಲೆ : ಭತ್ತದ ಬೆಳೆಯ ಮೇಲೆ ದುಷ್ಪರಿಣಾಮ ಬೀರಿದ ಚಂಡಮಾರುತ !

Update: 2019-11-03 22:38 IST
ಸಾಂದರ್ಭಿಕ ಚಿತ್ರ

ಮಂಗಳೂರು, ನ.3: ಕಳೆದೊಂದು ವಾರದಿಂದ ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ಕ್ಯಾರ್’ ಮತ್ತು ‘ಮಹಾ’ ಚಂಡಮಾರುತದ ಪ್ರಭಾವವು ದ.ಕ.ಜಿಲ್ಲೆಯ ಭತ್ತದ ಬೆಳೆಯ ಮೇಲೆ ಭಾರೀ ದುಷ್ಪರಿಣಾಮ ಬೀರಿದ್ದು, ರೈತರು ವಸ್ತುಶಃ ಕಂಗಾಲಾಗಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಭತ್ತದ ಬೆಳೆಯು ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಆದರೂ ಕೆಲವು ಕೃಷಿ ಆಸಕ್ತರ ಜಾಗೃತಿಯ ಪರಿಣಾಮವಾಗಿ ಮತ್ತು ಭತ್ತದ ಬೆಳೆ ಕೃಷಿಯ ಮೇಲೆ ಒಲವುಳ್ಳ ರೈತರು ಅಲ್ಲಲ್ಲಿ ಗದ್ದೆ ನಿರ್ಮಿಸುತ್ತಿದ್ದರು.

ಕಳೆದ ಜೂನ್‌ನಲ್ಲಿ ಮಳೆ ಆರಂಭವಾದಾಗ ‘ವಾಯು’ ಚಂಡಮಾರುತ ಬೀಸಿತ್ತು. ಇದು ಮುಂಗಾರಿನ ಮೇಲೆ ಪರಿಣಾಮ ಬೀರಿತ್ತು. ಅಲ್ಲದೆ ಭತ್ತ ನಾಟಿಯು ತಡವಾಗಿ ಅರಂಭಗೊಂಡಿತ್ತು. ಬೆಳೆ ಕಟಾವಿಗೆ ರೈತರು ಸಿದ್ಧರಾಗುತ್ತಿದ್ದಂತೆಯೇ ‘ಕ್ಯಾರ್’ ಚಂಡಮಾರುತ ಬೀಸಿತ್ತು. ಇದು ಭತ್ತದ ಬೆಳೆಯ ಮೇಲೆ ವ್ಯಾಪಕ ಹಾನಿಯನ್ನುಂಟು ಮಾಡಿತ್ತು. ಅದರ ಬೆನ್ನಿಗೆ ‘ಮಹಾ’ ಚಂಡಮಾರುತ ಕೂಡಾ ಅಪ್ಪಳಿಸಿದ ಪರಿಣಾಮ ಕಟಾವು ಮಾಡಲಾಗದೆ ರೈತರು ಕಂಗಾಲಾಗಿದ್ದಾರೆ.

ಕೃಷಿ ಇಲಾಖೆಯು ನೀಡಿದ ಅಂಕಿ ಅಂಶದ ಪ್ರಕಾರ ದ.ಕ. ಜಿಲ್ಲೆಯಲ್ಲಿ ಕಟಾವಿಗೆ ಸಿದ್ಧವಾಗಿದ್ದ 1.04 ಹೆಕ್ಟೇರ್ ಭತ್ತದ ಬೆಳೆ ಚಂಡಮಾರುತ್ತಕ್ಕೆ ನಾಶವಾಗಿದೆ. ವಿವಿಧ ಕಾರಣದಿಂದ ಮೊದಲೇ ಭತ್ತದ ಬೆಳೆ ತೆಗೆಯಲು ಹಿಂದೇಟು ಹಾಕುತ್ತಿದ್ದ ರೈತರು ಚಂಡಮಾರುತದಿಂದಾದ ಹಾನಿಯಿಂದ ಮತ್ತಷ್ಟು ಹತಾಶರಾಗಿದ್ದಾರೆ.

ಎರಡನೇ ಬೆಳೆ ಪರಿಣಾಮ: ಕಳೆದ ವಾರದ ಬಿರುಸಿನ ಮಳೆಯು ಎರಡನೇ ಬೆಳೆಯ ಮೇಲೂ ದುಷ್ಪರಿಣಾಮ ಬೀಳಲಿದೆ. ಮೊದಲ ಬೆಳೆಯು ಮಳೆಯನ್ನು ಅವಲಂಬಿಸಿತ್ತು. ಮಳೆ ಸುರಿದಷ್ಟು ಬೆಳೆ ಚೆನ್ನಾಗಿ ಬರಲಿದೆ. ಎರಡನೇ ಬೆಳೆಯು ಚಳಿಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ನೀರು ಮತ್ತು ಬಿಸಿಲು ಇದ್ದಷ್ಟು ಬೆಳೆ ಬರುತ್ತದೆ. ಮಳೆಯಿಂದಾಗಿ ಚಳಿಗಾಲ ಮುಂದೆ ಹೋಗಿರುವುದರಿಂದ ಪೈರು ಕಟ್ಟಲೂ ಕೂಡಾ ಸಮಸ್ಯೆಯಾಗಲಿದೆ.

ಯಾಂತ್ರೀಕೃತ ಕಟಾವು ಕೂಡಾ ಕಷ್ಟ: ಜಿಲ್ಲೆಯಲ್ಲಿ ಶೇ.40ರಷ್ಟು ಮಾತ್ರ ಕಟಾವು ಪೂರ್ಣಗೊಂಡಿದೆ. ನಿರಂತರವಾಗಿ ಮಳೆ ಸುರಿದ ಪರಿಣಾಮ ಗದ್ದೆಯಲ್ಲಿ ನೀರು ತುಂಬಿತ್ತು. ಮಳೆಯ ಜತೆಗೆ ಅಬ್ಬರಿಸಿದ ಗಾಳಿಯಿಂದ ಗದ್ದೆಯಲ್ಲಿ ಪೈರು ಅಡ್ಡ ಬಿದ್ದಿದ್ದು, ಇದು ಕೂಡಾ ಕಟಾವಿಗೆ ಸಮಸ್ಯೆಯಾಗಿದೆ. ಕೆಲವು ಕಡೆ ಪೈರಿನಲ್ಲಿದ್ದ ಭತ್ತ ಮೊಳಕೆಯೊಡೆದಿದೆ. ಇದರಿಂದ ಯಾಂತ್ರೀಕೃತ ಕಟಾವು ಮಾಡಲು ಕಷ್ಟವಾಗಿದೆ ಎಂದು ಮಿತ್ತಬಾಗಿಲಿನ ಕೃಷಿಕ ಬಿ.ಕೆ.ಪರಮೇಶ್ವರ ರಾವ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News