×
Ad

ಬಾಣಂತಿ ಮೃತ್ಯು ಪ್ರಕರಣ: ತನಿಖೆಗೆ ಒತ್ತಾಯಿಸಿ ದೂರು

Update: 2019-11-03 22:51 IST

ಬಂಟ್ವಾಳ : ಹೆರಿಗೆಗಾಗಿ ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ ಅಜೆಕಳದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ನಡೆದಿದೆ.

ಬಂಟ್ವಾಳ ಅಜೆಕಳ ನಿವಾಸಿ ಉದಯಕುಮಾರ್ ಎಂಬವರ  ಪತ್ನಿ ಉಷಾ (32) ಮೃತ ಮಹಿಳೆ. ಹೆರಿಗೆಯ ದಿನಾಂಕ ಸಮೀಪಿಸಿದ ಹಿನ್ನೆಲೆಯಲ್ಲಿ ವೈದ್ಯರ ಸಲಹೆಯಂತೆ ಉಷಾ ಅವರನ್ನು 2ನೇ ಹೆರಿಗೆಗಾಗಿ ನ. 2ರಂದು ಬಿ.ಸಿ.ರೋಡಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಸಂಜೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಮಗುವಿಗೆ ಜನ್ಮ ನೀಡಿದ್ದರು. ಅಂದು ರಾತ್ರಿ ಇಲ್ಲಿನ ವೈದ್ಯರು ಉಷಾ ಅವರಿಗೆ ತುರ್ತು ಚಿಕಿತ್ಸೆ ಅಗತ್ಯವಿದೆ ಎಂದು ಮಂಗಳೂರಿಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದ್ದರು.

ಆದರೆ, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಪರೀಕ್ಷಿಸುವ ವೇಳೆ ಉಷಾ ಅವರು ಮೃತಪಟ್ಟಿರುದಾಗಿ ಅಲ್ಲಿನ ವೈದ್ಯರು ದೃಢ ಪಡಿಸಿರುವುದಾಗಿ ಉಷಾ ಕುಟುಂಬ ತಿಳಿಸಿದೆ. ಪ್ರಸ್ತುತ ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಸಾವಿನ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದೆ. ಇಂದು ಮರಣೋತ್ತರ ಪರೀಕ್ಷೆ ನಡೆದಿದ್ದು, ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಗೆ ಆಗ್ರಹ

ಮೃತ ಉಷಾ ಅವರ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಹಾಗೂ ಸಾವಿನ ಕಾರಣದ ಕುರಿತ ತನಿಖೆ ನಡೆಸುವಂತೆ ಉಷಾ ಅವರ ಕುಟುಂಬ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ. ಈ ಸಂಬಂಧ ಉಷಾ ಸಂಬಂಧಿ ಚೇತನ್ ಎಂಬವರ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News