ಜಮ್ಮು-ಕಾಶ್ಮೀರ: ಇಂದು ರಾಜಧಾನಿ ಸ್ಥಳಾಂತರ

Update: 2019-11-03 17:39 GMT

ಜಮ್ಮು, ನ.3: ಜಮ್ಮು ಮತ್ತು ಕಾಶ್ಮೀರದಲ್ಲಿ ‘ದರ್ಬಾರ್ ಮೂವ್’ ಎಂದು ಕರೆಯಲಾಗುವ ರಾಜಧಾನಿ ಸ್ಥಳಾಂತರ ಕಾರ್ಯಕ್ರಮ ನವೆಂಬರ್ 4ರಂದು ನಡೆಯಲಿದೆ.

 ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷದ ಆರು ತಿಂಗಳು ಶ್ರೀನಗರ ಮತ್ತು ಉಳಿದ ಆರು ತಿಂಗಳು ಜಮ್ಮು ರಾಜಧಾನಿಯಾಗಿ ಇರುತ್ತದೆ. ಶ್ರೀನಗರದಲ್ಲಿರುವ ಸಿವಿಲ್ ಸೆಕ್ರೆಟೇರಿಯಟ್ ಹಾಗೂ ಇತರ ಸರಕಾರಿ ಇಲಾಖೆಗಳನ್ನು ಅಕ್ಟೋಬರ್ 25-26ರಂದು ಮುಚ್ಚಲಾಗಿದ್ದು ನವೆಂಬರ್ 4ರಂದು ಜಮ್ಮುವಿನಲ್ಲಿ ಆರಂಭವಾಗಲಿದೆ.

ಕಚೇರಿಗಳ ಸ್ಥಳಾಂತರ ಹಾಗೂ ಇತರ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಅಧಿಕಾರಿಗಳು ರವಿವಾರ ಜಮ್ಮುವಿನ ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮುಗೆ ವಿವರಿಸಿದರು. ಜಮ್ಮುವಿನ ವಿಭಾಗೀಯ ಅಧಿಕಾರಿ ಸಂಜೀವ್ ವರ್ಮ ಮತ್ತು ಐಜಿಪಿ ಮುಕೇಶ್ ಸಿಂಗ್ ರಾಜಭವನದಲ್ಲಿ ಮುರ್ಮುರನ್ನು ಭೇಟಿ ಮಾಡಿ ರಾಜಧಾನಿ ಸ್ಥಳಾಂತರದ ಬಗ್ಗೆ ಮಾಹಿತಿ ನೀಡಿದರು ಎಂದು ರಾಜಭವನದ ಮೂಲಗಳು ತಿಳಿಸಿವೆ.

 ಈ ಸಂದರ್ಭ ಮಾತನಾಡಿದ ಲೆಜ ಮುರ್ಮು, ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಗರಿಷ್ಟ ಗಮನ ನೀಡಬೇಕು. ಪೊಲೀಸ್ ಹಾಗೂ ಆಡಳಿತದ ಮಧ್ಯೆ ಸಮನ್ವಯತೆ ಇದ್ದರೆ ಭದ್ರತೆಗೆ ಎದುರಾಗುವ ಯಾವುದೇ ಸವಾಲುಗಳನ್ನು ಎದುರಿಸಲು ನೆರವಾಗುತ್ತದೆ ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ಬಳಿಕ ನಡೆಯುವ ಪ್ರಥಮ ರಾಜಧಾನಿ ಸ್ಥಳಾಂತರದ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News