ಉತ್ತರ ಪ್ರದೇಶ: 6 ದುಷ್ಕರ್ಮಿಗಳಿಂದ ಮಹಿಳೆಯ ಸಾಮೂಹಿಕ ಅತ್ಯಾಚಾರ

Update: 2019-11-03 17:46 GMT

ಬಂದಾ, ನ. 3: ಮಹಿಳೆಯೋರ್ವರನ್ನು 6 ಮಂದಿ ಸಾಮೂಹಿಕ ಅತ್ಯಾಚಾರ ಎಸಗಿ, ಕೃತ್ಯದ ವೀಡಿಯೊವನ್ನು ಆನ್‌ಲೈನ್‌ಲ್ಲಿ ಪೋಸ್ಟ್ ಮಾಡಿದ ಘಟನೆ ಉತ್ತರಪ್ರದೇಶದ ಚಿತ್ರಕೂಟ ಜಿಲ್ಲೆಯಲ್ಲಿ ನಡೆದಿದೆ.

ಆದರೆ, ಈ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬಳಿಕವಷ್ಟೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ.

 ಈ ಘಟನೆ ಮವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಆದರೆ, ಶುಕ್ರವಾರ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

 ಮಹಿಳೆ ತನ್ನ ಕುಟುಂಬದ ಸದಸ್ಯರೊಂದಿಗೆ ಸಂಬಂಧಿಕರ ಮನೆಗೆ ತೆರಳುತ್ತಿದ್ದರು. ಅವರನ್ನು 6 ಮಂದಿ ಇದ್ದ ಗುಂಪು ಮಾರ್ಗ ಮಧ್ಯೆ ತಡೆಯಿತು. ಕುಟುಂಬದ ಸದಸ್ಯರನ್ನು ಮರಕ್ಕೆ ಕಟ್ಟಿ ಹಾಕಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿತು ಎಂದು ಮವು ಪೊಲೀಸ್ ಠಾಣೆಯ ಅಧಿಕಾರಿ ಅರುಣ್ ಪಾಠಕ್ ತಿಳಿಸಿದ್ದಾರೆ.

ಅಕ್ಟೋಬರ್ 28ರಂದು ನಡೆದ ಘಟನೆಯ 14 ನಿಮಿಷಗಳ ವೀಡಿಯೊ ದೃಶ್ಯಾವಳಿ ಅತ್ಯಾಚಾರದ ಘಟನೆಯನ್ನು ದೃಢಪಡಿಸಿದೆ. ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಘಟನೆ ನಡೆದ ಬಳಿಕ ನಾನು ಇದೇ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ಅಲ್ಲಿದ್ದ ಅಧಿಕಾರಿಗಳ ಘಟನೆಯ ವಿವರ ನೀಡಿದ್ದೆ. ಆದರೆ ಅವರು ನನಗೆ ಬೈದರು ಹಾಗೂ ಅಲ್ಲಿಂದ ತೆರಳುವಂತೆ ಸೂಚಿಸಿದರು ಎಂದು ಮಹಿಳೆ ಆರೋಪಿಸಿದ್ದಾರೆ.

ಈ ಘಟನೆಯ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಡಿದ ಬಳಿಕ ಮಹಿಳೆ ಪೊಲೀಸ್ ಅಧೀಕ್ಷಕರನ್ನು ಭೇಟಿಯಾಗಿ ದೂರು ನೀಡಿದರು. ಅನಂತರವಷ್ಟೇ ಪೊಲೀಸರು ದೂರು ದಾಖಲಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News