ತೀಸ್ ಹಜಾರಿ ನ್ಯಾಯಾಲಯದಲ್ಲಿ ಪೊಲೀಸರು-ವಕೀಲರ ನಡುವೆ ಘರ್ಷಣೆ ಪ್ರಕರಣ: ಸಿಟ್ ತನಿಖೆಗೆ ನಿರ್ಧಾರ
ಹೊಸದಿಲ್ಲಿ, ನ. 3: ತೀಸ್ ಹಝಾರಿ ನ್ಯಾಯಾಲಯದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಘರ್ಷಣೆಯ ತನಿಖೆ ನಡೆಸಲು ವಿಶೇಷ ತನಿಖಾ ತಂಡ (ಸಿಟ್) ರಚಿಸಲಾಗುವುದು ಎಂದು ದಿಲ್ಲಿ ಪೊಲೀಸರು ರವಿವಾರ ತಿಳಿಸಿದ್ದಾರೆ.
ದಿಲ್ಲಿ ಪೊಲೀಸರನ್ನು ಪ್ರತಿನಿಧಿಸಿದ ನ್ಯಾಯವಾದಿ ರಾಹುಲ್ ಮೆಹ್ರಾ, ಘರ್ಷಣೆಯಲ್ಲಿ ಪಾಲ್ಗೊಂಡ ಓರ್ವ ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ ಹಾಗೂ ಇನ್ನೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಸಿ. ಶಂಕರ್ ಅವರನ್ನು ಒಳಗೊಂಡ ಪೀಠಕ್ಕೆ ತಿಳಿಸಿದರು.
ಘರ್ಷಣೆಗೆ ಸಂಬಂಧಿಸಿ ಹತ್ಯಾ ಯತ್ನ ಹಾಗೂ ಸಂಬಂಧಿತ ಕಲಂಗಳ ಅಡಿಯಲ್ಲಿ ನಾಲ್ಕು ಪ್ರಥಮ ಮಾಹಿತಿ ವರದಿ ದಾಖಲಿಸಲಾಗಿದೆ ಎಂದು ಕೂಡ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ತೀಸ್ ಹಝಾರಿ ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ ಅಪರಾಹ್ನ ವಕೀಲರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ 20 ಪೊಲೀಸರು ಹಾಗೂ ಹಲವು ವಕೀಲರು ಗಾಯಗೊಂಡಿದ್ದರು. 17 ವಾಹನಗಳಿಗೆ ಹಾನಿ ಮಾಡಲಾಗಿತ್ತು.