×
Ad

ಗುಡ್ಡೆಕೊಪ್ಲದಿಂದ ಡ್ರೆಜ್ಜರ್ ತೆರವಿಗೆ ಮೊಗವೀರ ಸಂಘ ಆಗ್ರ

Update: 2019-11-04 21:23 IST

ಮಂಗಳೂರು, ನ.4: ಸುರತ್ಕಲ್ ಗುಡ್ಡೆಕೊಪ್ಲ ಗ್ರಾಮದ ಕಡಲ ಕಿನಾರೆಯಲ್ಲಿ ಸಿಲುಕಿಕೊಂಡಿರುವ ಹೂಳೆತ್ತುವ ಭಗವತಿ ಪ್ರೇಮ್ ನೌಕೆಯನ್ನು ಸ್ಥಳಾಂತರಗೊಳಿಸುವಂತೆ ಗುಡ್ಡೆಕೊಪ್ಲ ಮೊಗವೀರ ಸಂಘ ಮತ್ತು ಮೊಗವೀರ ಮಹಾಸಭಾ ಸಂಘಟನೆಗಳು ಜಿಲ್ಲಾಡಳಿತ ಹಾಗೂ ನವಮಂಗಳೂರು ಬಂದರು ಮಂಡಳಿಯನ್ನು ಒತ್ತಾಯಿಸಿವೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿದ ಗುಡ್ಡೆಕೊಪ್ಲ ಮೊಗವೀರ ಸಂಘದ ಅಧ್ಯಕ್ಷ ಕೇಶವ ಕುಂದರ್ ಮತ್ತು ದೊಡ್ಡಕೊಪ್ಲ ಮೊಗವೀರ ಮಹಾಸಭಾ ಅಧ್ಯಕ್ಷ ಗಿರಿಧರ್ ಕೋಟ್ಯಾನ್ ತಕ್ಷಣ ಡ್ರೆಜ್ಜರ್‌ನ್ನು ಸ್ಥಳಾಂತರಿಸುವಂತೆ ಆಗ್ರಹಿಸಿದ್ದಾರೆ.

ಪ್ರಸ್ತಾವಿತ ನೌಕೆಯನ್ನು ಸ್ಥಳದಲ್ಲೇ ಒಡೆಯುವ ಅಥವಾ ಹಾಗೆಯೇ ಉಳಿಸಿಕೊಳ್ಳುವುದರಿಂದ ಮೀನುಗಾರರಿಗೆ ಉಂಟಾಗುವ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿ, ಸಂಸದರು, ಶಾಸಕರು ಹಾಗೂ ನವಮಂಗಳೂರು ಬಂದರು ಮಂಡಳಿ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಆದರೆ ಇದುವರೆಗೆ ಸ್ಪಂದನೆ ಸಿಕ್ಕಿಲ್ಲ. ಡ್ರೆಜ್ಜರ್‌ನ್ನು ಅಲ್ಲಿಯೇ ನಿಲ್ಲಿಸಿರುವುದರಿಂದ ಮೀನುಗಾರಿಕೆಯನ್ನೇ ಅವಲಂಬಿಸಿರುವ ಗ್ರಾಮದ ಮೀನುಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಗ್ರಾಮದ ಬಹುತೇಕ ಮಂದಿ ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದು, ಹಡಗಿನಿಂದ ಹೊರಬರುವ ತೈಲ ಮತ್ತಿತರ ಅಪಾಯಕಾರಿ ವಸ್ತುಗಳಿಂದ ಸಮುದ್ರ ಮಾಲಿನ್ಯದ ಗಂಭೀರ ಅಪಾಯ ಎದುರಾಗಿದೆ. ಅಡಿಭಾಗದಲ್ಲಿ ಮತ್ಸ್ಯ ಸಂತತಿ ಬೆಳವಣಿಗೆಗೆ ಪೂರಕವಾದ ನಿಸರ್ಗದತ್ತ ರ್ಗಳಿದ್ದು, ನಾಡ ಮೀನುಗಾರಿಕೆಗೆ ಪೂರಕವಾಗಿದೆ. ಇಲ್ಲಿ ಯಾಂತ್ರೀಕೃತ ಬೋಟ್‌ಗಳು ಮೀನುಗಾರಿಕೆ ನಡೆಸಲು ಅಸಾಧ್ಯವಾಗಿರುವುದು ನಾಡದೋಣಿ ಮೀನುಗಾರರಿಗೆ ಅನುಕೂಲವಾಗಿದೆ ಎಂದು ಮೀನುಗಾರ ಮುಖಂಡ ಶರತ್‌ಗುಡ್ಡೆಕೊಪ್ಲ ತಿಳಿಸಿದರು.

ಜಿಲ್ಲೆಯ ಸಮುದ್ರ ತೀರದಲ್ಲಿ ಈಗಾಗಲೇ ವಿವಿಧ ಸಂದರ್ಭಗಳಲ್ಲಿ ಹಲವು ಹಡಗುಗಳು ಮುಳುಗಿದ್ದು, ಅವುಗಳನ್ನು ಎಲ್ಲೂ ಪೂರ್ಣ ಪ್ರಮಾಣದಲ್ಲಿ ತೆರವುಗೊಳಿಸಲು ಸಾಧ್ಯವಾಗಿಲ್ಲ. ಒಡೆದು ಹಡಗುಗಳನ್ನು ತೆರವುಗೊಳಿಸಿದ ಕಡೆ ನೀರಿನಡಿಯಲ್ಲಿದ್ದ ಹಡಗಿನ ಪೂರ್ಣ ಭಾಗವನ್ನು ತೆರವುಗೊಳಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಗುಡ್ಡೆಕೊಪ್ಲ ಪ್ರದೇಶದ ಸಾಗರ ತೀರದಲ್ಲಿ ನೆಲ ಸ್ಪರ್ಶಿಸಿ ನೀರಿನಲ್ಲಿ ನಿಂತಿದ್ದ ಹೂಳೆತ್ತುವ ನೌಕೆಯನ್ನು ಇತರ ಪ್ರದೇಶಕ್ಕೆ ಸ್ಥಳಾಂತರಿಸುವುದೇ ಸೂಕ್ತ ಎಂದು ಶರತ್‌ಗುಡ್ಡೆಕೊಪ್ಲ ಅಭಿಪ್ರಾಯಪಟ್ಟರು.

ಮೀನುಗಾರರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದರೆ ಇತರ ಮೀನುಗಾರಿಕಾ ಸಂಘಟನೆಗಳು ಹಾಗೂ ಸಮಾಜದ ಮುಖಂಡರ ಜತೆ ಸಮಾಲೋಚನೆ ನಡೆಸಿ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸಚೇಂದ್ರ ಗುರಿಕಾರ್, ಶ್ರೀಕಾಂತ್ ಸಾಲ್ಯಾನ್, ನರೇಶ್ ಕರ್ಕೇರ, ಶಿವರಾಮ್ ಸುರತ್ಕಲ್, ಶುಭಕರ್ ಕರ್ಕೇರ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News