×
Ad

ನ.8ರಿಂದ ‘ರಾಗ ಸುಧಾ ರಸ-ರಾಷ್ಟ್ರೀಯ ಸಂಗೀತೋತ್ಸವ’

Update: 2019-11-04 21:30 IST

ಮಂಗಳೂರು, ನ.4: ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಯ ‘ರಾಗ ಸುಧಾ ರಸ ರಾಷ್ಟ್ರೀಯ ಸಂಗೀತೋತ್ಸವ’ ಕಾರ್ಯಕ್ರಮವು ನ.8,9ರಂದು ನಗರದ ಪುರಭವನದಲ್ಲಿ, ನ.10ರಂದು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ, ನ.24ರಂದು ಪುತ್ತೂರಿನ ‘ಬಹುವಚನಂ’ ಸಭಾಂಗಣದಲ್ಲಿ ನಡೆಸಲಿದೆ ಎಂದ ಅಕಾಡಮಿಯ ಅಧ್ಯಕ್ಷ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು ನ.8ರಂದು ಸಂಜೆ 4 ಕ್ಕೆ ಮಂಗಳೂರಿನ ಆರಭಿ ಮ್ಯೂಸಿಕ್ ಅಕಾಡಮಿ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ, 4:40ಕ್ಕೆ ಯುವ ಕಲಾವಿದೆ ಭಾಮನಿ ಕೆ. ಭಟ್, ಬಳಿಕ ಯುವ ಕಲಾವಿದ ಚೆನ್ನೈನ ಭರತ್ ಸುಂದರ್ ಅವರಿಂದ ಹಾಡುಗಾರಿಕೆ ನಡೆಯಲಿದೆ. ನ.9ರಂದು ಸಂಜೆ 4ಕ್ಕೆ ಕೃಷ್ಣಗಾನ ಸುಧಾ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ನಡೆಯಲಿದೆ ಎಂದರು.

ಅಕಾಡೆಮಿಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಮಾತನಾಡಿ, ಈ ಬಾರಿಯ ಯುವ ಕಲಾಮಣಿ ಪ್ರಶಸ್ತಿಯನ್ನು ಅನೀಶ್ ವಿ. ಭಟ್‌ಗೆ, ಚೆನ್ನೈನ ಮಣಿ ಕೃಷ್ಣಸ್ವಾಮಿ ಫೌಂಡೇಶನ್‌ನಿಂದ ಕೊಡಲ್ಪಡುತ್ತಿರುವ ಡಾ.ಮಣಿ ಕೃಷ್ಣಸ್ವಾಮಿ ವಾರ್ಷಿಕ ಪ್ರಶಸ್ತಿಯನ್ನು ಆತ್ರೇಯೀ ಕೃಷ್ಣಾ ಅವರಿಗೆ ನೀಡಲಾಗುವುದು ಎಂದರು.

ಯುವ ಕಲಾಮಣಿ ಪ್ರಶಸ್ತಿಯು 25,000 ರೂ.ನಗದು ಮತ್ತು ಪ್ರಶಸ್ತಿ ಲಕ ಹೊಂದಿದ್ದು, ಡಾ.ಮಣಿ ಕೃಷ್ಣಸ್ವಾಮಿ ವಾರ್ಷಿಕ ಪ್ರಶಸ್ತಿಯು 10,000 ರೂ.ನಗದು ಮತ್ತು ಪ್ರಶಸ್ತಿ ಲಕ ಒಳಗೊಂಡಿದೆ ಎಂದು ತಿಳಿಸಿದರು.

ಹಿರಿಯ ಯಕ್ಷಗಾನ ಭಾಗವತ ಬಲಿಪ ನಾರಾಯಣ ಭಾಗವತರನ್ನು ಅವರು ಯಕ್ಷಗಾನ ಸಂಗೀತಕ್ಕೆ ನೀಡಿದ ಕೊಡುಗೆ ಮನ್ನಿಸಿ ನ.6ರಂದು ಪೂರ್ವಾಹ್ನ 11ಕ್ಕೆ ಅವರ ಸ್ವಗೃಹದಲ್ಲಿ ಸನ್ಮಾನಿಸಲಾಗುವುದು. ಸನ್ಮಾನವು10,000 ರೂ. ನಗದು ಪುರಸ್ಕಾರ ಒಳಗೊಂಡಿದೆ. ನ.10ರಂದು ಸಂಜೆ 4ಕ್ಕೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಾದ ಸರಸ್ವತಿ ಸಂಗೀತ ವಿದ್ಯಾಲಯದ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ ನಡೆಯಲಿದೆ.

ಬಳಿಕ ಮೈಸೂರಿನ ಐಶ್ವರ್ಯ ಮಣಿಕರ್ಣಿಕೆ ಅವರಿಂದ ವೀಣಾ ವಾದನ ನಡೆಯಲಿದೆ. ವಿಠಲ ರಾಮಮೂರ್ತಿ ಮತ್ತು ವಿ.ವಿ.ಎಸ್. ಮುರಾರಿ ಅವರಿಂದ ವಯಲಿನ್ ವಯೋಲ ಜುಗಲ್ಬಂದಿ ನಡೆಯಲಿದೆ. ನ.24ರಂದು ಪುತ್ತೂರಿನ ಬಹುವಚನಂನಲ್ಲಿ ಸಂಜೆ 4ಕ್ಕೆ ಪುತ್ತೂರಿನ ಗಾನ ಸರಸ್ವತಿ ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಸಂಗೀತ ಕಛೇರಿ, 4:40ಕ್ಕೆ ಆತ್ರೇಯೀ ಕೃಷ್ಣಾ, ಬಳಿಕ ಅನೀಶ್ ವಿ.ಭಟ್‌ರ ಸಂಗೀತ ಕಛೇರಿ ನಡೆಯಲಿದೆ. ಅಗಲಿದ ಸ್ಯಾಕ್ಸೋಫೋನ್ ವಿದ್ವಾಂಸ ಪದ್ಮಶ್ರೀಡಾ.ಕದ್ರಿ ಗೋಪಾಲನಾಥ್‌ಗೆ ಕಾರ್ಯಕ್ರಮ ಸಮರ್ಪಿಸಲಾಗುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಅಕಾಡಮಿಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಹಿರಿಯ ಕಲಾವಿದ ನಾಗೇಶ್ ಬಪ್ಪನಾಡು, ಬಾಲಕೃಷ್ಣ ಸರಳಾಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News