ಕುಂದಾಪುರದಲ್ಲಿ ‘ಕಾರ್ಟೂನು ಹಬ್ಬ’ : ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕಾರ್ಟೂನು ಸ್ಪರ್ಧೆ
ಕುಂದಾಪುರ, ನ.4: ಕುಂದಾಪುರ ಕಾರ್ಟೂನು ಹಬ್ಬದ ಸ್ಕೂಲ್‌ಟೂನ್ ಚಾಂಪಿಯನ್‌ಶಿಪ್ ಸ್ಪರ್ಧೆಯ ಪ್ರಯುಕ್ತ ನ.23ರಂದು ಕುಂದಾಪುರ ಬೋರ್ಡ್ ಹೈಸ್ಕೂಲ್‌ನ ರೋಟರಿ ಕಲಾಮಂದಿರದಲ್ಲಿ ಅಪರಾಹ್ನ 2:00 ಗಂಟೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಶಾಲಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವ್ಯಂಗ್ಯಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
5ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ವಿಷಯ ‘ಗಾಂಧೀಜಿ’ ಅವರ ಚಿತ್ರ ರಚನೆ. ಇದರಲ್ಲಿ ವಿಜೇತರಿಗೆ ಪ್ರಥಮ ಬಹಮಾನ 6,000ರೂ., ದ್ವಿತೀಯ 4,000 ಹಾಗೂ ತೃತೀಯ 2,000ರೂ. 6ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ವಿಷಯ ‘ಈಶ್ವರ ಅಲ್ಲಾ ತೇರೋ ನಾಮ್’. ಕೋಮು ಸೌಹಾರ್ದತೆ ಬಗ್ಗೆ ಕಾರ್ಟೂನು ರಚನೆ. ಇದರಲ್ಲಿ ಪ್ರಥಮ ಬಹುಮಾನ 8,000ರೂ. ದ್ವಿತೀಯ ರೂ.6,000 ಹಾಗೂ ತೃತೀಯ 3000 ರೂ.
ಕಾಲೇಜು ವಿದ್ಯಾರ್ಥಿಗಳಿಗೆ ಸಹ ಕಾರ್ಟೂನ್ ವಿಷಯ: ‘ಈಶ್ವರ ಅಲ್ಲಾ ತೇರೋ ನಾಮ್’. ಕೋಮು ಸೌಹಾರ್ದತೆ ಬಗ್ಗೆ ಚಿತ್ರರಚನೆ ಇದ್ದು, ಇದರಲ್ಲಿ ಪ್ರಥಮ 10,000ರೂ., ದ್ವಿತೀಯ 7,000ರೂ. ಹಾಗೂ ತೃತೀಯ ಬಹುಮಾನ 4,000ರೂ. ಆಗಿರುತ್ತದೆ.
ಖ್ಯಾತ ಕಾರ್ಟೂನಿಸ್ಟ್ ದಿ.ಮಾಯಾ ಕಾಮತ್ ಅವರ ಸ್ಮರಣಾರ್ಥವಾಗಿ ಅವರ ಕುಟುಂಬದ ಸಹಯೋಗದೊಂದಿಗೆ ಹೆಣ್ಣು ಮಕ್ಕಳಲ್ಲಿ ಕಾರ್ಟೂನು ಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸಲು ವಿದ್ಯಾರ್ಥಿನಿಯರಿಗಾಗಿಯೇ ಸ್ಪರ್ಧೆ ಆಯೋಜಿಸಲಾಗಿದೆ. ಮುಖ್ಯ ಸ್ಪರ್ಧೆಯಿಂದ ಆಯ್ದ ವಿದ್ಯಾರ್ಥಿನಿಯರ ಮೂರು ಅತ್ಯುತ್ತಮ ಕಾರ್ಟೂನುಗಳಿಗೆ ಪ್ರಥಮ ಬಹುಮಾನವಾಗಿ ರೂ. 7,000, ದ್ವಿತೀಯ ರೂ. 5000 ಹಾಗೂ ತೃತೀಯ ರೂ. 3000ವನ್ನು ನೀಡಲಾಗುವುದು. ಪ್ರತೀ ಬಹುಮಾನವೂ ನಗದು ಜೊತೆಗೆ ಟ್ರೋಫಿ, ಸರ್ಟಿಫಿಕೇಟ್ ಮತ್ತು ಕಾರ್ಟೂನು ಪುಸ್ತಕವನ್ನು ಒಳಗೊಂಡಿರುತ್ತದೆ.
ನವೆಂಬರ್ 24ರಂದು ಸಂಜೆ 4 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ವಿಜೇತ ಶಾಲೆ ಅಥವಾ ಕಾಲೇಜುಗಳಿಗೆ ಟ್ರೋಫಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಳಿಗಾಗಿ ಮೊಬೈಲ್ ಸಂಖ್ಯೆ: 9686109573ನ್ನು ಸಂಪರ್ಕಿಸಬಹುದು ಎಂದು ಕಾರ್ಟೂನ್ ಹಬ್ಬದ ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.