×
Ad

ಬಿಎಸ್ ವೈ ಆಡಿಯೊ ಸೋರಿಕೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ಮನವಿಯ ವಿಚಾರಣೆ

Update: 2019-11-04 21:42 IST

ಹೊಸದಿಲ್ಲಿ, ನ. 4: ‘‘ಬಂಡಾಯ ಶಾಸಕರನ್ನು ಮುಂಬೈಯಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ನಿಗಾದಲ್ಲಿ ಇರಿಸಲಾಗಿತ್ತು’’ ಎಂದು ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳುವ ಸೋರಿಕೆಯಾದ ಆಡಿಯೊ ತುಣುಕು ಕುರಿತ ಕಾಂಗ್ರೆಸ್ ಮನವಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿಕೊಂಡಿದೆ.

ಹಿರಿಯ ನ್ಯಾಯವಾದಿ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಈ ವಿಷಯವನ್ನು ಸುಪ್ರೀಂ ಕೋರ್ಟ್‌ನ ಮುಂದೆ ಪ್ರಸ್ತಾಪಿಸಿದರು. ಸುಪ್ರೀಂ ಕೋರ್ಟ್ ಮನವಿಯ ವಿಚಾರಣೆಯನ್ನು ಮಂಗಳವಾರ ನಡೆಸುವುದಾಗಿ ಒಪ್ಪಿಕೊಂಡಿತು. ಎಚ್‌ಡಿ ಕುಮಾರ ಸ್ವಾಮಿ ಸರಕಾರದ ವಿಶ್ವಾಸ ಮತ ಯಾಚಿಸುವುದಕ್ಕೆ ಮುನ್ನ ಕರ್ನಾಟಕದ 17 ಶಾಸಕರನ್ನು ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ತೀರ್ಪನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಕಾದಿರಿಸಿದೆ.

7 ನಿಮಿಷಗಳ ಆಡಿಯೊ ತುಣುಕಿನಲ್ಲಿ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಗೆ ಅನರ್ಹಗೊಂಡ ಕಾಂಗ್ರೆಸ್-ಜೆಡಿ(ಎಸ್) ಶಾಸಕರಿಗೆ ಟಿಕೆಟ್ ನೀಡುವ ಕುರಿತು ಪಕ್ಷದ ಇತರ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವ ಕುರಿತು ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಸಭೆಯಲ್ಲಿ ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದರು. ‘‘ಹೇಗಾದರೂ ಇರಲಿ, ಇಂದು ನೀವು (ಪಕ್ಷದ ನಾಯಕರು) ಮಾತನಾಡಿದ ರೀತಿ ಸರಕಾರವನ್ನು ಉಳಿಸುವ ಉದ್ದೇಶವನ್ನು ಹೊಂದಿದಂತೆ ತೋರುತ್ತಿಲ್ಲ. 17 ಶಾಸಕರ ಬಗ್ಗೆ ನಿರ್ಧಾರವನ್ನು ಯಡಿಯೂರಪ್ಪ ಅಥವಾ ಇತರ ಯಾವುದೇ ರಾಜ್ಯ ನಾಯಕರು ತೆಗೆದುಕೊಂಡಿಲ್ಲ ಎಂಬುದು ನಿಮಗೆ ಗೊತ್ತಿದೆ. ಅವರ ನಿಗಾದಲ್ಲಿ ಶಾಸಕರನ್ನು ಎರಡೂವರೆ ತಿಂಗಳು ಮುಂಬೈಯಲ್ಲಿ ಇರಿಸಲಾಗಿತ್ತು. ಇದರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿದೆ. ಅಲ್ಲವೇ?’’ ಎಂದು ಯಡಿಯೂರಪ್ಪ ಅವರು ಹೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ.

ಇಲ್ಲಿ ಇರಿಸಿದ್ದುದರಿಂದ ಅವರಿಗೆ ಎರಡೂವರೆ ಮೂರು ತಿಂಗಳು ತಮ್ಮ ಕ್ಷೇತ್ರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ತಮ್ಮ ಪತ್ನಿ ಮಕ್ಕಳನ್ನು ನೋಡಲು ಸಾಧ್ಯವಾಗಲಿಲ್ಲ. ಸರಿಯಲ್ಲವೇ? ಎಂದು ಅವರು ಹೇಳುತ್ತಿರುವುದು ಆಡಿಯೊದಲ್ಲಿ ಕೇಳಿ ಬಂದಿದೆ. ಈ ಆಡಿಯೊದ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದ ಜೆಡಿಎಸ್ ನಾಯಕ ಕುಮಾರ ಸ್ವಾಮಿ, ‘‘ಅಧಿಕಾರ ಹಾಗೂ ಹಣವನ್ನು ಬಿಜೆಪಿ ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂಬುದು ಬಹಿರಂಗವಾಗಿದೆ. ಇನ್ನು ಜನರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News