ಮಹಾದಾಯಿ ವಿವಾದ: ಜಾವಡೇಕರ್ ಅವರನ್ನು ಭೇಟಿಯಾದ ಗೋವಾದ ಸರ್ವ ಪಕ್ಷಗಳ ನಿಯೋಗ

Update: 2019-11-04 16:16 GMT

ಪಣಜಿ, ನ. 4: ಮಹಾದಾಯಿ ನದಿಯ ಕಳಸಾ ಬಂಡೂರಿ ಯೋಜನೆಗೆ ಪರಿಸರ ಸಚಿವಾಲಯ ಕರ್ನಾಟಕಕ್ಕೆ ಅನುಮತಿ ನೀಡಿರುವ ಬಗ್ಗೆ ಚರ್ಚೆ ನಡೆಸಲು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸರ್ವ ಪಕ್ಷಗಳ ನಿಯೋಗ ಸೋಮವಾರ ಕೇಂದ್ರ ಪರಿಸರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರನ್ನು ಭೇಟಿಯಾಗಿದೆ.

ಮಹಾದಾಯಿ ನದಿ ನೀರು ಹಂಚಿಕೆ ಹಾಗೂ ಮಹಾದಾಯಿ ನದಿ ನೀರನ್ನು ತಿರುಗಿಸುವ ಮೂಲಕ ಉತ್ತರ ಕರ್ನಾಟಕದ ಮೂರು ಜಿಲ್ಲೆಗಳಿಗೆ ಕುಡಿಯು ನೀರು ಪೂರೈಸುವ ಉದ್ದೇಶ ಹೊಂದಿರುವ ಕಳಸಾ ಬಂಡೂರಿ ಯೋಜನೆ ಕುರಿತು ಗೋವಾ ಹಾಗೂ ಕರ್ನಾಟಕ ನಡುವೆ ಬಿಕ್ಕಟ್ಟು ಏರ್ಪಟ್ಟಿದೆ. ಈ ಹಿಂದೆ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಕೇಂದ್ರ ಸರಕಾರ ಅಂತಹ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಹೇಳಿದ್ದರು. ಆದರೆ, ಈಗ ಅನುಮತಿ ದೊರೆತಿರುವುದು ಗೊಂದಲ ಉಂಟು ಮಾಡಿದೆ. ಈ ನಡುವೆ ಜಾವ್ಡೇಕರ್ ಈ ಹಿಂದಿನ ತನ್ನ ಟ್ವೀಟ್ ಅನ್ನು ಹಿಂದೆ ತೆಗೆದುಕೊಂಡಿದ್ದಾರೆ. ರಾಜ್ಯ ಜಲ ಸಂಪನ್ಮೂಲ ಇಲಾಖೆಯ ಸಚಿವ ಫಿಲಿಪ್ ನೇರಿ ರೋಡ್ರಿಗಸ್, ಪ್ರತಿಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್ ಗೋವಾ ಫಾರ್ವರ್ಡ್ ಪಕ್ಷದ ವಿಜಯ್ ಸರ್ದೇಶಾಯಿ, ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷದ ನಾಯಕ ಸುದಿನ್ ಧವಲಿಕರ್ ಹಾಗೂ ಎನ್‌ಸಿಪಿಯ ಚರ್ಚಿಲ್ ಅಲೆಮೊ ಒಳಗೊಂಡ ನಿಯೋಗ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿಯಾಗಿದೆ.

ಪರಿಸರ ಅನುಮತಿ ನೀಡಿದ ಯಾವುದೇ ಪತ್ರದ ಕುರಿತು ತನಗೆ ತಿಳಿದಿಲ್ಲ ಎಂದು ಜಾವ್ಡೇಕರ್ ಹೇಳಿದ್ದಾರೆ. 10 ದಿನಗಳ ಒಳಗೆ ಈ ಬಗ್ಗೆ ಸ್ಪಷ್ಟನೆ ನೀಡಲಾಗುವುದು ಎಂದು ಪ್ರಕಾಶ್ ಜಾವಡೇಕರ್ ನಿಯೋಗಕ್ಕೆ ಭರವಸೆ ನೀಡಿದ್ದಾರೆ ಎಂದು ಕಾಮತ್ ತಿಳಿಸಿದ್ದಾರೆ.

‘‘ಗೋವಾಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುವಂತೆ ನಾನು ಜಾವಡೇಕರ್ ಅವರನ್ನು ಆಗ್ರಹಿಸಿದ್ದೇನೆ. ಕರ್ನಾಟಕಕ್ಕೆ ನೀಡಿದ ಅನುಮತಿ ಪತ್ರವನ್ನು ಕೂಡಲೇ ಹಿಂದೆ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದೇನೆ. ಮಹಾದಾಯಿ ನದಿ ನೀರು ವಿವಾದ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ ಎಂಬುದನ್ನು ನಾನು ಅವರ ಗಮನಕ್ಕೆ ತಂದಿದ್ದೇನೆ.’’ ಎಂದು ಕಾಮತ್ ಹೇಳಿದ್ದಾರೆ. ಜಾವಡೇಕರ್ ಅವರೊಂದಿಗಿನ ಭೇಟಿಯ ಕುರಿತು ಗೋವಾ ಮುಖ್ಯಮಂತ್ರಿ ಕಚೇರಿ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News