ಸರಕಾರ ರಚನೆಗೆ ಶಿವಸೇನೆ ಅಡ್ಡಿ ಮಾಡುತ್ತಿಲ್ಲ: ರಾಜ್ಯಪಾಲರ ಭೇಟಿಯಾದ ಸಂಜಯ್ ರಾವತ್ ಹೇಳಿಕೆ

Update: 2019-11-04 16:23 GMT

ಮುಂಬೈ, ಅ. 4: ವಿಧಾನಸಭೆ ಚುನಾವಣೆ ನಡೆದು ಸುಮಾರು ಎರಡು ವಾರ ಕಳೆದರೂ ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಪರಿಹಾರವಾಗುವಂತೆ ಕಾಣುತ್ತಿಲ್ಲ. ಈ ನಡುವೆ ಸೋಮವಾರ ರಾಜ್ಯಪಾಲರನ್ನು ಭೇಟಿಯಾಗಿರುವ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವತ್, ಮಹಾರಾಷ್ಟ್ರ ಸರಕಾರ ರೂಪಿಸಲು ಶಿವಸೇನೆ ಯಾವುದೇ ಅಡ್ಡಿ ಉಂಟು ಮಾಡುತ್ತಿಲ್ಲ ಎಂದಿದ್ದಾರೆ.

ಬಹುಮತ ದೊರಕಿದವರಿಗೆ ಸರಕಾರ ರಚಿಸಲು ಅವಕಾಶ ನೀಡಬೇಕು ಎಂದು ಹೇಳಿದ ರಾವತ್, ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಭೇಟಿ ಸೌಜನ್ಯದ ಭೇಟಿ ಎಂದಿದ್ದಾರೆ. ನೂತನ ಸರಕಾರ ರಚಿಸುವ ಕುರಿತು ರಾಜ್ಯದಲ್ಲಿನ ಪ್ರಸಕ್ತ ರಾಜಕೀಯ ಪರಿಸ್ಥಿತಿಗೆ ಶಿವಸೇನೆ ಹೊಣೆಗಾರನಲ್ಲ ಎಂಬುದನ್ನು ನಾವು ರಾಜ್ಯಪಾಲರಿಗೆ ತಿಳಿಸಿದ್ದೇವೆ ಎಂದು ಅವರು ಹೇಳಿದರು.

“ನಮ್ಮ ಮಾತುಗಳನ್ನು ರಾಜ್ಯಪಾಲರು ತಾಳ್ಮೆಯಿಂದ ಆಲಿಸಿದರು. ನಾವು ನಮ್ಮ ನಿಲುವನ್ನು ಅವರ ಮುಂದಿರಿಸಿದೆವು” ಎಂದು ರಾವತ್ ತಿಳಿಸಿದ್ದಾರೆ. ‘‘ಮಹಾರಾಷ್ಟ್ರದಲ್ಲಿ ಸರಕಾರ ರಚಿಸಲು ಸ್ವಲ್ಪ ಸಮಯ ಇದೆ ಎಂದು ರಾಜ್ಯಪಾಲರು ನಮಗೆ ತಿಳಿಸಿದ್ದಾರೆ. ಬಹುಮತ ಪಡೆದ ಯಾವುದೇ ಪಕ್ಷ ಮುಂದೆ ಬರಬಹುದು ಹಾಗೂ ಸರಕಾರ ರಚಿಸುವ ಹಕ್ಕು ಪ್ರತಿಪಾದಿಸಬಹುದು ಎಂದು ರಾಜ್ಯಪಾಲರು ತಿಳಿಸಿದ್ದಾರೆ’’ ಎಂದು ರಾವತ್ ಹೇಳಿದರು.

ರಾಜಭವನದಲ್ಲಿ ಸಂಜೆ 5 ಗಂಟೆಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಭೇಟಿಯಾಗುವ ಸಂದರ್ಭ ರಾವತ್ ಅವರೊಂದಿಗೆ ಸಹೋದ್ಯೋಗಿ ಹಾಗೂ ಮಹಾರಾಷ್ಟ್ರದ ಸಚಿವ ರಾಮದಾಸ್ ಕದಮ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News