ಕರೆ ಮಾಡಿದ್ದು ನಿಜ ಒತ್ತಡ ಹೇರಿಲ್ಲ: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ನ.4: ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಮೊಯ್ದಿನ್ ಬಾವ ಅವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳು ನನ್ನನ್ನು ಸಂಪರ್ಕಿಸಿದ್ದರು. ಮಾಹಿತಿ ಖಚಿತಪಡಿಸಿಕೊಳ್ಳಲು ಪೊಲೀಸ್ ಠಾಣೆಗೆ ಕರೆ ಮಾಡಿರುವುದು ನಿಜ. ಆದರೆ ಪ್ರಕರಣದಲ್ಲಿ ಯಾವುದೇ ಒತ್ತಡ ಹೇರಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಜನಪ್ರತಿನಿಧಿಗಳು, ಮಾಜಿ ಶಾಸಕರ ಮೇಲೆ ನಡೆಯುವ ಹಲ್ಲೆ, ಚಪ್ಪಲಿ ತೂರಾಟದಂತಹ ಘಟನೆಗಳು ದೇಶದಲ್ಲಿ ಸಾಮಾನ್ಯವಾಗುತ್ತಿವೆ. ಇಂದು ಬಾವ ಅವರ ಮೇಲೆ ಹಲ್ಲೆ ನಡೆದಿದೆ. ನಾಳೆ ನನ್ನ ಮೇಲೂ ನಡೆಯಬಹುದು. ಇವುಗಳನ್ನು ಯಾರೂ ಸಮರ್ಥಿಸಿಕೊಳ್ಳದೆ ಎಲ್ಲರೂ ಖಂಡಿಸಬೇಕು ಎಂದರು.
ಹಲ್ಲೆ ಆರೋಪಿಗಳು ನನ್ನ ಬಳಿ ಬಂದಿದ್ದರು. ಅಂತಹ ಸಂದರ್ಭದಲ್ಲಿ ಜನಪ್ರತಿನಿಧಿಗಳು ಸ್ಪಂದಿಸಬೇಕಾಗುತ್ತದೆ. ಮೊಯ್ದಿನ್ ಬಾವ ಒಳ್ಳೆಯ ವ್ಯಕ್ತಿ ಅವರಲ್ಲಿಯೇ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದೆ. ಪ್ರಕರಣಕ್ಕೆ ರಾಜಕೀಯ ಬಣ್ಣ ಲೇಪಿಸುವುದು ಬೇಡ ಎಂದು ಮನವಿ ಮಾಡಿದರು.