ಮನಪಾ ನೀರಿನ ದರ ಏರಿಸಿದ್ದು ಕಾಂಗ್ರೆಸ್: ಶಾಸಕ ವೇದವ್ಯಾಸ ಕಾಮತ್
ಮಂಗಳೂರು, ನ.4: ಮಂಗಳೂರು ಮಹಾನಗರ ಪಾಲಿಕೆಯ ಕುಡಿಯುವ ನೀರಿನ ದರವನ್ನು ಕಾಂಗ್ರೆಸ್ ಪಕ್ಷದ ಆಡಳಿತಾವಧಿಯಲ್ಲಿ ಏರಿಕೆ ಮಾಡಿರುವುದು ಶತಸತ್ಯ. ಮಂಗಳೂರಿನ ಜನತೆಯನ್ನು ಸಂಕಷ್ಟಕ್ಕೀಡು ಮಾಡಿರುವುದು ಸಲ್ಲದು ಎಂದು ಶಾಸಕ ವೇದವ್ಯಾಸ ಕಾಮತ್ ಖಂಡಿಸಿದ್ದಾರೆ.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸಂಜೆ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕರು, ಕಾಂಗ್ರೆಸ್ ಪಕ್ಷವು ಜನರನ್ನು ಲೂಟಿ ಮಾಡುವುದಲ್ಲದೆ, ಮನಪಾ ಚುನಾವಣೆ ಸಮಯದಲ್ಲಿ ಬಿಜೆಪಿಯವರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಆರೋಪಿಸಿದರು.
ನೀರಿನ ದರವನ್ನು ಏಕಾಏಕಿ ಏರಿಕೆ ಮಾಡಿರುವುದರಿಂದ ನಗರದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ. ಕಳೆದ ಐದು ವರ್ಷಗಳಿಂದ ಪಾಲಿಕೆಯು ಕುಡಿಯುವ ನೀರಿನ ಬಿಲ್‌ಗಳನ್ನು ಜಾರಿಗೊಳಿಸುವಲ್ಲಿ ಹಾಗೂ ದರ ವಸೂಲಾತಿಯಲ್ಲಿ ವೈಫಲ್ಯ ಕಂಡಿದೆ ಎಂದರು.
ಈ ಹಿಂದೆ ಆಡಳಿತ ನಡೆಸಿದ ಮೇಯರ್‌ಗಳು ಕೂಡ ನೀರಿನ ಲಕ್ಷಗಟ್ಟಲೇ ಬಿಲ್ ಬಾಕಿಯಿರುವಂತಹ ವ್ಯಕ್ತಿಗಳ ಪಟ್ಟಿ ಬಹಿರಂಗಪಡಿಸಲಾಗಿತ್ತು. ಈ ಎಲ್ಲ ವೈಫಲ್ಯಗಳ ನಡುವೆ ಕಾಂಗ್ರೆಸ್ ಪಕ್ಷವು ಪಾಲಿಕೆಯಲ್ಲಿ ಆಡಳಿತಾಧಿಕಾರಿ ಅವಧಿಯಲ್ಲಿ (ಜೂನ್ ತಿಂಗಳು) ಏಕಾಏಕಿಯಾಗಿ ನೀರಿನ ದರವನ್ನು ಮೂರು-ನಾಲ್ಕು ಪಟ್ಟು ಏರಿಕೆ ಮಾಡಿದೆ ಎಂದರು.
ನೀರಿನ ದರ ಏರಿಕೆಯಿಂದ ಜನತೆ ಪರದಾಡಲು ಕಾಂಗ್ರೆಸ್ ಪಕ್ಷವೇ ಕಾರಣ. ನೀರಿನ ದರ ಏರಿಕೆ ಸಂಪೂರ್ಣ ಅವೈಜ್ಞಾನಿಕವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರಕಾರವಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಯು.ಟಿ.ಖಾದರ್‌ನೀರಿನ ದರ ಏರಿಕೆ ಮಾಡುವ ಮೂಲಕ ಜನವಿರೋಧಿ ನಿಲುವು ತಾಳಿದ್ದರು ಎಂದು ಶಾಸಕರು ಆಪಾದನೆ ಮಾಡಿದರು.
ಪಾಲಿಕೆಯು ಈ ಹಿಂದೆ ಗೃಹ ಬಳಕೆಗೆ ತಿಂಗಳೊಂದಕ್ಕೆ ಕನಿಷ್ಠ 24 ಸಾವಿರ ಲೀಟರ್ ನೀರು ಬಳಸಲು ಅವಕಾಶವಿತ್ತು. ಇದನ್ನು ಏಕಾಏಕಿ 8,000 ಲೀಟರ್‌ಗೆ ಸೀಮಿತಗೊಳಿಸಿರುವುದು ಖಂಡನೀಯ. ಏತನ್ಮಧ್ಯೆ, ಕಾಂಗ್ರೆಸ್ ಆಡಳಿತ ವೈಫಲ್ಯಗಳನ್ನು ಬಿಜೆಪಿ ಜನಪ್ರತಿನಿಧಿಗಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿಯ ಮುಖಂಡರಾದ ರವೀಂದ್ರಕುಮಾರ್, ರಾಜಗೋಪಾಲ ರೈ ಮತ್ತಿತರರು ಉಪಸ್ಥಿತರಿದ್ದರು.
‘ಕಾಂಗ್ರೆಸ್‌ಗೆ ಸೋಲು ಖಚಿತ’
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ದೇಶಾದ್ಯಂತ ಬಿಜೆಪಿಯತ್ತ ಒಲವು ಹೆಚ್ಚುತ್ತಿದೆ. ಮನಪಾ ವ್ಯಾಪ್ತಿಯಲ್ಲಿ ಬಿಜೆಪಿಯ ಮುಖಂಡರು ಭಾರೀ ಅಬ್ಬರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಪ್ರಚಾರ ಸಭೆಗಳು ರಾತ್ರಿವರೆಗೂ ಮುಂದುವರಿದಿರುತ್ತವೆ. ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವುದು ಖಚಿತ ಎಂದು ಶಾಸಕ ವೇದವ್ಯಾಸ ಕಾಮತ್ ಭವಿಷ್ಯ ನುಡಿದಿದ್ದಾರೆ.