×
Ad

‘ಅನೀತಿಯುತ ಪದ್ಧತಿ’ ಕುರಿತು ದೂರಿಗೆ ಸಾಕ್ಷ್ಯಾಧಾರದ ಕೊರತೆ: ಇನ್ಫೋಸಿಸ್

Update: 2019-11-04 22:22 IST

ಹೊಸದಿಲ್ಲಿ,ನ.4: ಅನಾಮಧೇಯ ವ್ಯಕ್ತಿಗಳು ಪ್ರಸ್ತಾಪಿಸಿರುವ ಅನೀತಿಯುತ ಉದ್ಯಮ ಪದ್ಧತಿಗಳ ಆರೋಪಗಳನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯವು ತನ್ನ ಬಳಿಯಿಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಂಸ್ಥೆ ಇನ್ಫೋಸಿಸ್ ಶನಿವಾರ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ ( ಎನ್‌ಎಸ್‌ಇ)ಕ್ಕೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದು,ಈ ಹಿನ್ನೆಲೆಯಲ್ಲಿ ಸೋಮವಾರ ಶೇರು ಮಾರುಕಟ್ಟೆಗಳಲ್ಲಿ ಬೆಳಗಿನ ವಹಿವಾಟುಗಳಲ್ಲಿ ಕಂಪನಿಯ ಶೇರುಗಳು ಶೇ.6.5ರಷ್ಟು ಏರಿಕೆಯನ್ನು ದಾಖಲಿಸಿದ್ದವು. ಬಳಿಕ 21 ರೂ.ಗಳಿಕೆ (ಶೇ.3.05)ಯೊಡನೆ 709 ರೂ.ನಲ್ಲಿ ಮುಕ್ತಾಯಗೊಂಡಿವೆ.

ತಮ್ಮನ್ನು ‘ನೈತಿಕ ನೌಕರರು’ಎಂದು ಕರೆದುಕೊಂಡಿದ್ದ ಕೆಲವು ಅನಾಮಧೇಯ ವ್ಯಕ್ತಿಗಳು ಇನ್ಫೋಸಿಸ್‌ನ ಸಿಇಒ ಸಲೀಲ್ ಪಾರೇಖ್ ಮತ್ತು ಸಿಎಫ್‌ಒ ನೀಲಾಂಜನ ರಾಯ್ ಅವರು ಕಂಪನಿಯ ಆದಾಯ ಮತ್ತು ಲಾಭವನ್ನು ಹೆಚ್ಚಿಗೆ ತೋರಿಸುವ ಮೂಲಕ ಅನೀತಿಯುತ ಪದ್ಧತಿಗಳಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿ ಸೆ.20ರಂದು ಆಡಳಿತ ಮಂಡಳಿಗೆ ದೂರು ಸಲ್ಲಿಸಿದ್ದರು.

ಪಾರೇಖ್ ಅವರು ಆಡಳಿತ ಮಂಡಳಿಯ ಸದಸ್ಯರಾದ ಡಿ.ಎನ್.ಪ್ರಹ್ಲಾದ್, ಡಿ.ಸುಂದರಂ ಮತ್ತು ಕಿರಣ ಮುಜುಮ್ದಾರ್-ಶಾ ಅವರ ವಿರುದ್ಧ ಲಘುವಾಗಿ ಮಾತನಾಡುತ್ತಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿತ್ತು. ಆರೋಪಗಳನ್ನು ಸಾಬೀತುಗೊಳಿಸುವ ಇಮೇಲ್‌ಗಳು ಮತ್ತು ಧ್ವನಿ ಮುದ್ರಣಗಳು ತಮ್ಮ ಬಳಿಯಿವೆ ಎಂದೂ ಈ ಅನಾಮಧೇಯ ವ್ಯಕ್ತಿಗಳು ತಿಳಿಸಿದರು.

ಆರೋಪಗಳನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷಾಧಾರವನ್ನು ಈ ಅನಾಮಧೇಯ ದೂರಿನೊಂದಿಗೆ ತಾನು ಸ್ವೀಕರಿಸಿಲ್ಲ ಎಂದು ಇನ್ಫೋಸಿಸ್ ಎನ್‌ಎಸ್‌ಇಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ. ಆದರೆ ದೂರಿನ ಕುರಿತು ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News