ಸರ್ವರ್‌ಗಳಲ್ಲಿ ಸಮಸ್ಯೆ: ದೇಶಾದ್ಯಂತ ಇಂಡಿಗೋ ಯಾನಗಳಿಗೆ ವ್ಯತ್ಯಯ

Update: 2019-11-04 16:54 GMT

ಹೊಸದಿಲ್ಲಿ, ನ.4: ಇಂಡಿಗೋ ವಿಮಾನಯಾನ ಸಂಸ್ಥೆಯ ಸರ್ವರ್‌ಗಳಲ್ಲಿ ತೊಂದರೆಗಳು ಕಾಣಿಸಿಕೊಂಡಿದ್ದರಿಂದ ಸೋಮವಾರ ದೇಶಾದ್ಯಂತ ಅದರ ಸೇವೆಗಳಿಗೆ ವ್ಯತ್ಯಯಗಳುಂಟಾಗಿದ್ದವು. ವಿಮಾನ ನಿಲ್ದಾಣಗಳಲ್ಲಿ ಹತಾಶ ಪ್ರಯಾಣಿಕರು ಉದ್ದನೆಯ ಸರದಿ ಸಾಲುಗಳಲ್ಲಿ ನಿಲ್ಲುವಂತಾಗಿತ್ತು. ಸರ್ವರ್‌ಗಳಲ್ಲಿ ಸಮಸ್ಯೆಗೆ ಕಾರಣವೇನಾಗಿತ್ತು ಎನ್ನುವುದು ತಕ್ಷಣಕ್ಕೆ ಸ್ಪಷ್ಟವಾಗಿರಲಿಲ್ಲ.

ಗುರ್ಗಾಂವ್,ಚೆನ್ನೈ ಮತ್ತು ಪುಣೆಯಲ್ಲಿನ ಸರ್ವರ್‌ಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಅದನ್ನು ಬಗೆಹರಿಸಲು ಒಂದು ಗಂಟೆ ಕಾಲಾವಕಾಶ ಬೇಕಾಗುತ್ತದೆ. ಗ್ರಾಹಕರನ್ನು ಫೋನ್ ಮೂಲಕ ಸಂಪರ್ಕಿಸಿ ಅವರಿಗೆ ನೆರವಾಗುತ್ತಿದ್ದೇವೆ. ಈ ನಿರ್ದಿಷ್ಟ ಸಾಫ್ಟ್‌ವೇರ್‌ನಲ್ಲಿ ಮಾತ್ರ ತೊಂದರೆಯಿದೆ. ಗ್ರಾಹಕರು ಈಗಲೂ ಕಂಪನಿಯ ಜಾಲತಾಣಗಳ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಇಂಡಿಗೋದ ಅಧಿಕಾರಿಯೋರ್ವರು ಬೆಳಿಗ್ಗೆ ಸುದ್ದಿಸಂಸ್ಥೆಗೆ ತಿಳಿಸಿದ್ದರು.

ಬೆಳಿಗ್ಗೆ 9:40ರವರೆಗೆ ಯಾನಗಳು ವೇಳಾಪಟ್ಟಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸುತ್ತ್ತಿದ್ದವು,ಆ ಬಳಿಕ ಸಿಸ್ಟಮ್‌ಗಳಲ್ಲಿ ತೊಂದರೆ ಕಾಣಿಸಿಕೊಂಡಿತ್ತು ಎಂದು ಕೊಚ್ಚಿಯ ಇಂಡಿಗೋ ಅಧಿಕಾರಿಯೋರ್ವರು ತಿಳಿಸಿದರು. ಸರ್ವರ್ ಸಮಸ್ಯೆಯಿಂದಾಗಿ ಕರ್ನಾಟಕದಲ್ಲಿ ಬೆಂಗಳೂರು-ಮಂಗಳೂರು ಮತ್ತು ಬೆಂಗಳೂರು-ಚೆನ್ನೈ ಇಂಡಿಗೋ ಯಾನಗಳನ್ನು ರದ್ದುಗೊಳಿಸಲಾಗಿತ್ತು. ಮುಂಬೈನಲ್ಲಿ ಕನಿಷ್ಠ ಒಂಭತ್ತು ಯಾನಗಳ ನಿರ್ಗಮನವನ್ನು ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News