ಪಾದೂರು ಐಎಸ್‌ಪಿಆರ್‌ಎಲ್ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2019-11-04 17:35 GMT

ಕಾಪು : ಕಾಪು ಸಮೀಪದ ಪಾದೂರಿನಲ್ಲಿ ಕಾರ್ಯಾಚರಿಸುತ್ತಿರುವ ಕಚ್ಛಾ ತೈಲ ಸಂಗ್ರಹನಾ ಘಟಕ ಐ.ಎಸ್.ಪಿ.ಆರ್.ಎಲ್ ಯೋಜನೆಯ 2ನೇ ಹಂತದ ಯೋಜನೆಯ ವಿರುದ್ಧ ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಬೃಹತ್ ಪ್ರತಿಭಟನಾ ಸಭೆ ಸೋಮವಾರ ನಡೆಯಿತು. 

ಮಾಜಿ ಸಚಿವ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದು, ಸಭೆಗೂ ಮುನ್ನ ಮಜೂರು ಸರ್ಕಲ್‌ನಿಂದ ಪಾದೂರು ಕಚ್ಛಾ ತೈಲ ಸಂಗ್ರಹಾಗಾರ ಘಟಕದವರೆಗೆ ಪ್ರತಿಭಟನಾ ಜಾಥ ನಡೆಯಿತು. ಈ ಸಂದರ್ಭದಲ್ಲಿ ಯೋಜನೆ ವಿರುದ್ಧ ಹಾಗೂ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಬಳಿಕ ಐಎಸ್‌ಪಿಆರ್‌ಎಲ್ ಅಧಿಕಾರಿಗಳಿಗೆ ಮತ್ತು ಮಣಿಪಾಲಕ್ಕೆ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಐಎಸ್‌ಪಿಆರ್‌ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಪ್ರತಿಭಟನಾಕಾರರನ್ನು ತಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ವಿನಯಕುಮಾರ್ ಸೊರಕೆ, ಐಎಸ್‌ಪಿಆರ್‌ಎಲ್ ಜನವಿರೋಧಿ  ನೀತಿ ಅನುಸರಿಸುತ್ತಿದ್ದು ಜನರ ಸಂಕಷ್ಟದಲ್ಲಿ ಭಾಗಿಯಾಗಬೇಕಾಗಿದ್ದ ಜನಪ್ರತಿನಿಧಿಗಳು ಕಂಪಪನಿಯೊಂದಿಗೆ ಶಾಮೀಲಾಗಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಸರಕಾರ ಎರಡನೇ ಹಂತದ ವಿಸ್ತರಣೆಗೆ ಅವಕಾಶಕೊಟ್ಟಿರುವುದರಿಂದ ಮತ್ತಷ್ಟು ಜನ ನಿರ್ವಸತಿಗರಾಗಲಿದ್ದಾರೆ.ಎರಡನೇ ಹಂತದ ವಿಸ್ತರಣೆ  ಕನಿಷ್ಠ ಜನವಸತಿ ಪ್ರದೇಶ ಪ್ರದೇಶದಲ್ಲಿ ಆಗಬೇಕು ಎಂದು ಒತ್ತಾಯಿಸಿದರು.

ಭೂಮಿಯನ್ನು ಪಡೆಯಲು ಕಂಪೆೆನಿಯು ದಲ್ಲಾಳಿಗಳ ಮೂಲಕ ನಡೆಸಲಾಗುವ ದೌರ್ಜನ್ಯ ಖಂಡನೀಯ. ಭೂಮಿ ಕಳೆದುಕೊಳ್ಳುವವರಿಗೆ ಸರ್ಕಾರದ ಕಾನೂನಿನಂತೆ ಮಾರುಕಟ್ಟೆಯ ಮೂರು ಪಟ್ಟು ಧಾರಣೆ ನೀಡಬೇಕು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಲಿರುವುದಾಗಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಎಚ್ಚರಿಕೆಯನ್ನು ನೀಡಿದರು.

ದೇಶದ ಭದ್ರತೆಯ ಹಿತದೃಷ್ಠಿಯಿಂದ ಸ್ಥಾಪನೆಯಾದ ಮಹತ್ವದ ಯೋಜನೆಯಾದ ಪಾದೂರು ಕಚ್ಛಾ ತೈಲ ಸಂಗ್ರಾಹಕ ಘಟಕವನ್ನು ಇಂದಿನ ಕೇಂದ್ರ ಸರ್ಕಾರ ಅದಾನಿ, ರಿಲಾಯನ್ಸ್ ಕಂಪನಿಗೆ ಲಾಭ ತಂದುಕೊಡುವ ವ್ಯಾಪಾರ ಕೇಂದ್ರವಾಗಿ ಬದಲಾಯಿಸಿದೆ ಎಂದು ಮಾಜಿ ಸಚಿವ ವಿನಯ ಕುಮಶರ್ ಸೊರಕೆ ಆರೋಪಿಸಿದರು.

ಗ್ರಾಮ ಪಂಚಾಯತ್ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ದೇವಿಪ್ರಸಾದ್ ಶೆಟ್ಟಿ  ಮಾತನಾಡಿ, ಬಂಡೆ ಸ್ಪೋಟದಿಂದ ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ, ಸರ್ಕಾರದ ನಿಯಮದಂತೆ ಯೋಜನಾ ಪ್ರದೇಶ ಮತ್ತು ಹತ್ತಿರದ ಗ್ರಾಮಗಳಲ್ಲಿ ಸಿ.ಎಸ್.ಆರ್. ಯೋಜನೆ ಅನುಷ್ಠಾನಿಸ ಬೇಕು. ಮೊದಲ ಹಂತದ ಯೋಜನೆಯಿಂದ ಸಂತ್ರಸ್ತರಿಗೆ ಆದ ತೊಂದರೆಗಳಿಗೆ ಕೂಡಲೇ ಸ್ಪಂದಿಸಬೇಕು. ನಿರ್ವಸಿತರ ಮನೆಗೊಂದು ಖಾಯಂ ಉದ್ಯೋಗ, ನಿರ್ವಸಿತರ  ಕಾಲೋನಿ ನಿರ್ಮಾಣ, ಸ್ಥಳೀಯರಿಗೆ ಉದ್ಯೋಗ, ಯೋಜನಾ ಪ್ರದೇಶದ ಪರಿಸರದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕಿದೆ. ಮೂಲಭೂತ ಸೌಕರ್ಯದೊಂದಿಗೆ ಈ ಭಾಗದ ಸಮಗ್ರ ಅಭಿವೃದ್ಧಿಗೆ ಘಟಕವು ಸಹಕರಿಸಬೇಕು ಎಂದು ಆಗ್ರಹಿಸಿದರು.

ತಾಲ್ಲೂಕು ಪಂಚಾಯತ್ ಸದಸ್ಯರಾದ ಯು.ಸಿ.ಶೇಕಬ್ಬ ಉಚ್ಚಿಲ, ಮೈಕೆಲ್ ರಮೇಶ್ ಡಿಸೋಜ ಮುದರಂಗಡಿ, ದಿನೇಶ್ ಕೋಟ್ಯಾನ್ ಫಲಿಮಾರು, ಕಾಪು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ  ನವೀನ್‌ಚಂದ್ರ ಸುವರ್ಣ, ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ಪ್ರಮುಖರಾದ ಕೆ. ಲೀಲಾಧರ ಶೆಟ್ಟಿ, ವಿಶ್ವಾಸ್ ಅಮೀನ್, ಪ್ರಭಾ ಶೆಟ್ಟಿ, ದಿವಾಕರ್ ಡಿ.ಶೆಟ್ಟಿ, ಹರೀಶ್ ನಾಯಕ್ ಕಾಪು, ಫಾರೂಕ್ ಚಂದ್ರನಗರ, ನಾಗಭೂಷಣ್ ರಾವ್, ಗುಲಾಂ ಮೊಹಮ್ಮದ್, ಸುನಿಲ್ ಬಂಗೇರ, ಶಿವಾಜಿ ಸುವರ್ಣ, ದೀಪಕ್ ಕುಮಾರ್ ಎರ್ಮಾಳು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News