ಅಮೆರಿಕ ಜೊತೆ ಮಾತುಕತೆ ಇಲ್ಲ: ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಘೋಷಣೆ

Update: 2019-11-04 17:45 GMT

ಟೆಹರಾನ್ (ಇರಾನ್), ನ. 4: ಅಮೆರಿಕದೊಂದಿಗೆ ಮಾತುಕತೆ ನಡೆಸುವ ಸಾಧ್ಯತೆಯನ್ನು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ರವಿವಾರ ಹೇಳಿದ್ದಾರೆ.

‘‘ಎಲ್ಲ ಸಮಸ್ಯೆಗಳಿಗೆ ಅಮೆರಿಕದೊಂದಿಗೆ ಮಾತುಕತೆ ನಡೆಸುವುದೇ ಪರಿಹಾರ ಎಂದು ಭಾವಿಸುವವರು ತಪ್ಪು ಅಭಿಪ್ರಾಯ ಹೊಂದಿದ್ದಾರೆ’’ ಎಂದು ಟೆಹರಾನ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಒತ್ತೆಯಾಳು ಬಿಕ್ಕಟ್ಟು ಸಂಭವಿಸಿದ 40ನೇ ವಾರ್ಷಿಕ ದಿನದ ಮುನ್ನಾ ದಿನ ಮಾಡಿದ ಭಾಷಣವೊಂದರಲ್ಲಿ ಅವರು ಹೇಳಿದ್ದಾರೆ ಎಂದು ಅವರ ಅಧಿಕೃತ ವೆಬ್‌ ಸೈಟ್ ತಿಳಿಸಿದೆ.

‘‘ಅಮೆರಿಕದೊಂದಿಗೆ ಮಾತನಾಡಿದರೆ ಏನೂ ಆಗುವುದಿಲ್ಲ. ಯಾಕೆಂದರೆ ಅವರು ಖಂಡಿತವಾಗಿಯೂ ಯಾವುದೇ ರಿಯಾಯಿತಿ ನೀಡುವುದಿಲ್ಲ’’ ಎಂದರು.

 ಇರಾನ್‌ನ ಅಮೆರಿಕ ಬೆಂಬಲಿತ ಆಡಳಿತಗಾರ ಶಾರನ್ನು ಅಧಿಕಾರದಿಂದ ಕೆಳಗಿಳಿಸಿದ ಸುಮಾರು 9 ತಿಂಗಳ ಬಳಿಕ, 1979 ನವೆಂಬರ್ 4ರಂದು ವಿದ್ಯಾರ್ಥಿಗಳು ಟೆಹರಾನ್‌ ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯೊಳಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಒತ್ತೆಸೆರೆಯಾಳಾಗಿ ಇಟ್ಟುಕೊಂಡಿದ್ದರು. ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರನ್ನು ಒಪ್ಪಿಸಬೇಕು ಎಂದು ಅಮೆರಿಕವನ್ನು ಅವರು ಒತ್ತಾಯಿಸುತ್ತಿದ್ದರು.

ಬಿಕ್ಕಟ್ಟು ಕೊನೆಗೊಳ್ಳಲು 444 ದಿನಗಳು ಬೇಕಾದವು. ಕೊನೆಗೂ ವಿದ್ಯಾರ್ಥಿಗಳು 52 ಅಮೆರಿಕನ್ನರನ್ನು ಬಿಡುಗಡೆಗೊಳಿಸಿದರು. ಆದರೆ 1980ರಲ್ಲಿ ಅಮೆರಿಕವು ಇರಾನ್ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿತು. ಅಂದಿನಿಂದ ಉಭಯ ದೇಶಗಳ ನಡುವೆ ಯಾವುದೇ ಬಾಂಧವ್ಯ ಉಳಿಯಲಿಲ್ಲ.

ವೈರತ್ವಕ್ಕೆ ರಾಯಭಾರ ಕಚೇರಿ ಬಿಕ್ಕಟ್ಟು ಕಾರಣವಲ್ಲ: ಖಾಮಿನೈ

 1979 ನವೆಂಬರ್ 4ರಂದು ವಿದ್ಯಾರ್ಥಿಗಳು ಟೆಹರಾನ್ ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ವಶಪಡಿಸಿಕೊಂಡಿರುವುದು, ಇರಾನ್-ಅಮೆರಿಕ ಬಿಕ್ಕಟ್ಟಿಗೆ ಕಾರಣವಲ್ಲ ಎಂದು ಇರಾನ್‌ನ ಸರ್ವೋಚ್ಛ ನಾಯಕ ಆಯತುಲ್ಲಾ ಅಲಿ ಖಾಮಿನೈ ಅಭಿಪ್ರಾಯಪಟ್ಟಿದ್ದಾರೆ.

‘‘ಬಿಕ್ಕಟ್ಟು 1953ರ ಕ್ಷಿಪ್ರಕ್ರಾಂತಿಯಿಂದಲೇ ಆರಂಭವಾಗಿತ್ತು. ಅಂದು ರಾಷ್ಟ್ರೀಯ ಸರಕಾರವನ್ನು ಅಮೆರಿಕ ಉರುಳಿಸಿತು ಹಾಗೂ ತನ್ನ ಕೈಗೊಂಬೆ ಹಾಗೂ ಭ್ರಷ್ಟ ಸರಕಾರವನ್ನು ಅಮೆರಿಕ ಇರಾನ್‌ನಲ್ಲಿ ಪ್ರತಿಷ್ಠಾಪಿಸಿತು. ಅಮೆರಿಕವನ್ನು ನಂಬುವ ಮೂಲಕ ರಾಷ್ಟ್ರೀಯ ಸರಕಾರವು ತಪ್ಪು ಮಾಡಿತ್ತು’’ ಎಂದು ಟ್ವಿಟರ್‌ನಲ್ಲಿ ಖಾಮಿನೈ ಹೇಳಿದ್ದಾರೆ.

ಬ್ರಿಟನ್ ನೆರವಿನೊಂದಿಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸಂಘಟಿಸಿದ ಕ್ಷಿಪ್ರಕ್ರಾಂತಿಯು ಅತ್ಯಂತ ಜನಪ್ರಿಯ ಪ್ರಧಾನಿ ಮುಹಮ್ಮದ್ ಮುಸಾದಿಯನ್ನು ಅಧಿಕಾರದಿಂದ ಕೆಳಗಿಳಿಸಿತು. ಅವರು ಇರಾನ್‌ನ ತೈಲದ ರಾಷ್ಟ್ರೀಕರಣಕ್ಕೆ ಕರೆ ನೀಡಿದ್ದರು.

ಕ್ಷಿಪ್ರಕ್ರಾಂತಿಯ ಬಳಿಕ, ದೇಶದ ಕೊನೆಯ ಶಾರನ್ನು ಮರಳಿ ಅಧಿಕಾರಕ್ಕೆ ಏರಿಸಲಾಯಿತು. ಪ್ರಧಾನಿ ಮುಸಾದಿಯನ್ನು ಅಧಿಕಾರದಿಂದ ಕೆಳಗಿಳಿಸಲು ವಿಫಲ ಪ್ರಯತ್ನ ನಡೆಸಿದ ಬಳಿಕ ಶಾ 1953 ಆಗಸ್ಟ್‌ನಲ್ಲಿ ದೇಶದಿಂದ ಪಲಾಯನಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News