ಮಾಜಿ ಮೇಯರ್ ಪುರಂದರದಾಸ್ ಕೂಳೂರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ

Update: 2019-11-05 08:27 GMT

ಮಂಗಳೂರು, ನ.5: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಪುರಂದರ ದಾಸ್ ಕೂಳೂರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪಾಲಿಕೆ ಚುನಾವಣೆಯಲ್ಲಿ 17ನೆ ದೇರೆಬೈಲ್ ವಾರ್ಡ್‌ನಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಸಿದ್ದ ತನಗೆ ಬಿ ಫಾರಂ ನೀಡುವುದಾಗಿ ಕರೆಸಿಕೊಂಡು ಕೊನೆ ಕ್ಷಣದಲ್ಲಿ ನಿರಾಕರಿಸಿದ್ದರಿಂದ ಮನನೊಂದು ಇದೀಗ ರಾಜೀನಾಮೆ ನೀಡಿರುವುದಾಗಿ ಅವರು ತಿಳಿಸಿದ್ದಾರೆ.

‘‘1992-93ರಿಂದ ಎನ್‌ಎಸ್‌ಯುಐ ಅಧ್ಯಕ್ಷನಾಗಿ ಬಳಿಕ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೆ. 2002ರಲ್ಲಿ ಮನಪಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರವಾದ ದೇರೆಬೈಲ್ ವಾರ್ಡ್‌ನಿಂದ ಸ್ಪರ್ಧಿಸಿ ಗೆದ್ದು, 2004-05ರಲ್ಲಿ ಮೇಯರ್ ಆಗಿ ಸೇವೆ ಸಲ್ಲಿಸಿದ್ದೇನೆ. ಬಳಿಕ ಕ್ಷೇತ್ರದ ಮೀಸಲಾತಿ ಬದಲಾದ ಕಾರಣ ಅವಕಾಶ ಸಿಕ್ಕಿರಲಿಲ್ಲ. ಇದೀಗ ಈ ಬಾರಿ ಮತ್ತೆ ಸ್ಪರ್ಧಿಸುವ ಅವಕಾಶ ಇದ್ದ ಕಾರಣ ಅರ್ಜಿ ಹಾಕಿದ್ದೆ. ಪೂಜಾರಿಯವರ ಕಟ್ಟಾ ಬೆಂಬಲಿಗನಾಗಿದ್ದು, ಪವರ್ ಲಿಫ್ಟಿಂಗ್‌ನಲ್ಲಿ ರಾಷ್ಟ್ರೀಯ ತೀರ್ಪುಗಾರ ಕೂಡಾ. ನಾಮಪತ್ರ ಸಲ್ಲಿಸುವ ಕೊನೆಯ ದಿನ ಬಿ ಫಾರಂ ನೀಡುವುದಾಗಿ ಕರೆಸಲಾಗಿತ್ತು. ಪಕ್ಷದ ಕಚೇರಿಯಲ್ಲಿದ್ದು ಮಧ್ಯಾಹ್ನದವರೆಗೆ ಕಾದಾಗ ಮಾಜಿ ಸಚಿವ ಬಿ.ರಮಾನಾಥ ರೈಯವರು ನಿಮ್ಮನ್ನು ತುರ್ತಾಗಿ ಪಕ್ಷದ ಕಚೇರಿಗೆ ಕರೆದೊಯ್ದು ಮಾತುಕತೆ ನಡೆಸಿದ ಬಳಿಕ ಹೊರಬಂದ ನೀವು ನನಗೆ ಬಿ ಫಾರಂ ನೀಡಲಾಗುವುದಿಲ್ಲ ಎಂದು ಹೇಳಿದ್ದೀರಿ. ಇದರಿಂದ ನನ್ನ ವ್ಯಕ್ತಿತ್ವಕ್ಕೆ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ನಾನು ಸಲ್ಲಿಸಿದ ಸೇವೆಯನ್ನು ತಿರಸ್ಕರಿಸಿ ಅವಮಾನ ಮಾಡಿದ್ದೀರಿ ’’ಎಂದು ಪುರಂದರ ದಾಸ್ ಕೂಳೂರು ಪಕ್ಷದ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್‌ಗೆ ಬರೆದಿರುವ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News