ವಿಶೇಷ ತಂತ್ರಜ್ಞಾನದ ಡಿಜಿಟಲ್ ಚಿತ್ರ ಪ್ರದರ್ಶನದಲ್ಲಿ ಗಾಂಧಿ ಬದುಕು ಅನಾವರಣ

Update: 2019-11-05 14:37 GMT

ಮಣಿಪಾಲ, ನ.5: ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ, ಲೋಕ ಸಂಪರ್ಕ ಮತ್ತು ಸಂವಹನ ಪ್ರಾದೇಶಿಕ ಕಾರ್ಯಾಲಯ ಹಾಗೂ ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನ ಆಶ್ರಯದಲ್ಲಿ ಮಹಾತ್ಮ ಗಾಂಧಿ ಅವರ 150ನೇ ವರ್ಷಾಚರಣೆ ಪ್ರಯುಕ್ತ ಮಣಿಪಾಲ ಕೆಎಂಸಿಯ ಗ್ರೀನ್ಸ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಗಾಂಧಿ ಬದುಕಿನ ಸಮಗ್ರ ಚಿತ್ರಣ ಒಳಗೊಂಡ ವಿಶೇಷ ತಂತ್ರಜ್ಞಾನದ ಡಿಜಿಟಲ್ ಚಿತ್ರ ಪ್ರದರ್ಶನ ಗಮನ ಸೆಳೆಯುತ್ತಿದೆ.

ಸ್ವಚ್ಛ ಭಾರತ ಶಕ್ತ ಭಾರತ, ಬಾಪು ಅವರ ಕನಸಿನ ಭಾರತ ಎಂಬ ಧ್ಯೇಯದಡಿಯಲ್ಲಿ ಯುವಜನತೆಯನ್ನು ಕೇಂದ್ರೀಕರಿಸಿ ಗಾಂಧಿ ಚಿಂತನೆ, ತತ್ವಾದರ್ಶಗಳ ಬಗ್ಗೆ ಆಸಕ್ತಿ ಮೂಡಿಸಲು ಈ ಚಿತ್ರಪ್ರದರ್ಶನವನ್ನು ಕರ್ನಾಟಕದ ಮಣಿಪಾಲ ಸೇರಿದಂತೆ ದೇಶದ 26 ಕಡೆಗಳಲ್ಲಿ ಏರ್ಪಡಿಸಲಾಗಿದೆ. ಈ ಪ್ರದರ್ಶನ ನ.8ರವರೆಗೆ ಬೆಳಗ್ಗೆ 10ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ನಡೆಯಲಿದೆ.

ಈ ಚಿತ್ರಪ್ರದರ್ಶನವನ್ನು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸೋಮವಾರ ಉದ್ಘಾಟಿಸಿದರು. ಶಾಸಕ ಕೆ.ರಘುಪತಿ ಭಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ನಗರಸಭೆ ಸದಸ್ಯರಾದ ಕಲ್ಪನಾಸುದಾಮ, ಮಂಜು ನಾಥ ಮಣಿಪಾಲ, ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್, ಉಪಕುಲಪತಿ ಡಾ.ವಿನೋದ್ ಭಟ್, ರಿಜಿಸ್ಟ್ರಾರ್ ಡಾ.ನಾರಾ ಯಣ ಸಭಾಹಿತ್, ಕೇಂದ್ರ ಪ್ರಸಾರ ಸಚಿವಾಲಯ ಪ್ರಾದೇಶಿಕ ಲೋಕ ಸಂಪರ್ಕ ಕಾರ್ಯಾಲಯ ಬೆಂಗಳೂರು ಪ್ರಾದೇಶಿಕ ಮಹಾನಿರ್ದೇಶಕ ನಾಗೇಂದ್ರ ಸ್ವಾಮಿ, ಮಂಗಳೂರು ಪ್ರಾದೇಶಿಕ ಅಧಿಕಾರಿ ಜಿ.ತುಕರಾಮ ಗೌಡ, ಪ್ರದರ್ಶನ ಅಧಿಕಾರಿ ಪಿ.ಜಿ.ಪಾಟೀಲ್, ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್‌ನ ಪ್ರೊ.ವರೇಶ್ ಹಿರೇಗಂಗೆ ಉಪಸ್ಥಿತರಿದ್ದರು.

ವಿವಿಧ ತಂತ್ರಜ್ಞಾನಗಳಲ್ಲಿ ಗಾಂಧಿ: ಈ ಚಿತ್ರಪ್ರದರ್ಶನದಲ್ಲಿ ಗಾಂಧಿ ಜೀವನ, ಹೋರಾಟ, ತತ್ವ ಚಿಂತನೆಗಳನ್ನು ಟಚ್‌ಸ್ಕ್ರೀನ್ ತಂತ್ರಜ್ಞಾನ ಬೋರ್ಡ್ ಗಳು, ಆಗ್ಯುಮೆಟ್ ರಿಯಾಲಿಟಿ ತಂತ್ರಜ್ಞಾನ, ಡಿಜಿಟಲ್ ಧ್ವನಿಮುದ್ರಿಕೆ, ಪುಸ್ತಕ ಪ್ರದರ್ಶನ, ಗಾಂಧೀಜಿ ಅವರ ಹೋರಾಟ, ಸಾಮಾನ್ಯ ಜೀವನದ ಛಾಯಾ ಚಿತ್ರ ಸಂಗ್ರಹ, ಟೈಮ್‌ಲೈನ್ ರೋಲಿಂಗ್ ತಂತ್ರಜ್ಞಾ ಮೂಲಕ ಅನಾವರಣ ಗೊಳಿಸಲಾಗಿದೆ.

ಗಾಂಧೀಜಿಯ ಉಪ್ಪಿನ ಸತ್ಯಾಗ್ರಹವನ್ನು ಡಿಜಿಟಲ್ ತಂತ್ರಜ್ಞಾನದಿಂದ ಆಗ್ಯುಮೆಂಟ್ ರಿಯಾಲಿಟಿಯಲ್ಲಿ ಪ್ರದರ್ಶಿಸಲಾಗಿದೆ. ಇದರಲ್ಲಿ ಪ್ರೇಕ್ಷಕರು ಕೂಡ ಮರಳ ದಂಡೆಯ ಮೇಲೆ ಗಾಂಧೀಜಿ ಜೊತೆ ನಡೆದುಕೊಂಡು ಹೋಗ ಬಹುದಾಗಿದೆ. ಇದೆಲ್ಲವನ್ನೂ ಅಗ್ಯುಮೆಂಟ್ ರಿಯಾಲಿಟಿ ಮೂಲಕ ಎಲ್‌ಇಡಿ ಸ್ಕ್ರೀನ್ ಮೂಲಕ ನೋಡಬಹುದಾಗಿದೆ.

ಟಚ್‌ಸ್ಕ್ರೀನ್ ತಂತ್ರಜ್ಞಾನದ ಬೋರ್ಡ್ ಅಳವಡಿಸಲಾಗಿದ್ದು, ಅದರಲ್ಲಿ ಯಾವುದೇ ವಿಚಾರವನ್ನು ಟಚ್ ಮಾಡುವ ಮೂಲಕ ಗಾಂಧೀಜಿ ಸಿದ್ಧಾಂತ ವಿವರಣೆ, ಹೋರಾಟದ ಚಿತ್ರಣದ ವಿವರಣೆ ಪಡೆಯಬಹುದಾಗಿದೆ. ಇಲ್ಲಿ ಗಾಂಧೀಜಿ ಭಾಷಣದ ಆಡಿಯೋವನ್ನು ಹೆಡ್‌ಫೋನ್ ಮೂಲಕ ಆಲಿಸ ಬಹುದು. ಗಾಂಧಿಯ ಜನನದಿಂದ(1869-1948) ಮರಣದವರೆಗಿನ ಮಹತ್ವದ ಘಟನೆಗಳನ್ನು ವಿವರಿಸುವ ಟೈಮ್‌ಲೈನ್ ರೋಲಿಂಗ್ ತಂತ್ರಜ್ಞಾನ ಅದ್ಭುತವಾಗಿದೆ.

ಅದೇ ರೀತಿ ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸ್ ಪ್ರಕಟಿಸಿದ ಗಾಂಧೀಜಿ ಸಮಗ್ರ ಸಾಹಿತ್ಯದ 100 ಸಂಪುಟಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. ಗಾಂಧೀಜಿ ಬರೆದ ಪತ್ರ, ಲೇಖನ ಗಳು, ಅವರ ಕುರಿತು ದೇಶದ ಹಿರಿಯ ಸಾಹಿತಿಗಳು ಬರೆದ ಸಾಹಿತ್ಯಗಳು ಕೂಡ ಇದರಲ್ಲಿ ಒಳಗೊಂಡಿವೆ.

ಗಾಂಧಿ ಕುರಿತ ಸಿನಿಮಾಗಳ ದೃಶ್ಯ

ಗಾಂಧೀಜಿ ರಾಜಕೀಯ, ವೈಯಕ್ತಿಕ, ಸಾಮಾಜಿಕ, ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿ ಈಗಾಗಲೇ ಬಂದಿರುವ ಅನೇಕ ಆಂಗ್ಲ, ಹಿಂದಿ ಸಿನಿಮಾಗಳ ದೃಶ್ಯದ ತುಣುಕುಗಳನ್ನು ಇಲ್ಲಿ ವೀಕ್ಷಿಸಬಹುದು. ಅದಕ್ಕಾಗಿ ಪ್ರತ್ಯೇಕ ಟಚ್ ಬೋರ್ಡ್ ಆಳವಡಿಸಲಾಗಿದೆ. ಈ ತಂತ್ರಜ್ಞಾನದಲ್ಲಿ ಸಿನಿಮಾ ಪೋಸ್ಟರ್‌ಗಳನ್ನು ಟಚ್ ಮಾಡಿದಾಗ ಸಿನಿಮಾ ಟೀಸರ್ ತೆರೆದುಕೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News