×
Ad

ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣ: ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಮೌನ ಪ್ರತಿಭಟನಾ ಮೆರವಣಿಗೆ

Update: 2019-11-05 21:27 IST

ಉಡುಪಿ, ನ.5: ಶಿರ್ವ ಚರ್ಚಿನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಮಹೇಶ್ ಡಿಸೋಜ ಸಾವಿನ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಆಗ್ರಹಿಸಿ ಚರ್ಚ್‌ನ ಭಕ್ತರಿಂದ ಮಂಗಳವಾರ ಶಿರ್ವದಲ್ಲಿ ಬೃಹತ್ ಮೌನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು.

ಶಿರ್ವ ಚರ್ಚ್ ಆವರಣದಿಂದ ಶಿರ್ವ ಪೊಲೀಸ್ ಠಾಣೆಯವರೆಗೆ ನಡೆದ ವೌನ ಪ್ರತಿಭಟನಾ ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಸೇರಿ ದಂತೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ಕೈಯಲ್ಲಿ ಫಲಕಗಳನ್ನು ಹಿಡಿದುಕೊಂಡ ಪ್ರತಿಭಟನಕಾರರು ನ್ಯಾಯಕ್ಕಾಗಿ ಆಗ್ರಹಿಸಿದರು. ಪ್ರತಿಭಟನಾ ಮೆರವಣಿಗೆ ವೇಳೆ ಶಿರ್ವ ಪೇಟೆಯ ವರ್ತಕರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವ ಮೂಲಕ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು.

ಬಳಿಕ ಈ ಕುರಿತ ಮನವಿಯನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಅಬ್ದುಲ್ ಖಾದರ್ ಅವರಿಗೆ ಸಲ್ಲಿಸಲಾಯಿತು. ಫಾ.ಮಹೇಶ್ ಡಿಸೋಜ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡರು ಎಂಬುದನ್ನು ತನಿಖೆ ಮಾಡಬೇಕು. ಅವರು ಮಾನಸಿಕ ಖಿನ್ನತೆ ಒಳಗಾಗಿದ್ದರೆಂಬುದು ನೂರಕ್ಕೆ ನೂರು ಸುಳ್ಳು. ಮಾನಸಿಕ ಖಿನ್ನತೆ ಇರುವ ವ್ಯಕ್ತಿ ಶೈಕ್ಷಣಿಕ ಸಂಸ್ಥೆಯ ಚುಕ್ಕಾಣಿ ಹಿಡಿಯಲು ಸಾಧ್ಯವೇ ಇಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಆದುದರಿಂದ ಪ್ರಕರಣದ ಹೆಚ್ಚಿನ ತನಿಖೆಯನ್ನು ಉನ್ನತ ಮಟ್ಟದಲ್ಲಿ ನಡೆಸಿ ಫಾದರ್ ಸಾವಿಗೆ ನ್ಯಾಯ ಒದಗಿಸಿಕೊಡಬೇಕು. ಧರ್ಮಗುರುಗಳ ಸಾವಿನ ಹಿಂದೆ ಅಡಕವಾಗಿರುವ ವಿಚಾರ ಮತ್ತು ತಪ್ಪಿತಸ್ಥರು ಯಾರು ಎಂಬುದು ತನಿಖೆಯಿಂದ ಬಹಿರಂಗ ಪಡಿಸಬೇಕು. ಇಲ್ಲದಿದ್ದರೆ ಮುಂದೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಮಂಡಳಿ ಸದಸ್ಯರಾದ ಸುನೀಲ್ ಕಬ್ರಾಲ್, ಕೊರ್ನಾಡ್ ಕೆಸ್ತಲಿನೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಜಿಪಂ ಸದಸ್ಯ ವಿಲ್ಸನ್ ರೋಡ್ರಿಗಸ್, ಜಾನ್ಸನ್ ಡಾಲ್ಫ್ರೇಡ್ ಕೆಸ್ತಲಿನೋ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಫುಟಾರ್ಡೊ, ತಾಪಂ ಸದಸ್ಯ ಮೈಕಲ್ ರಮೇಶ್ ಡಿಸೋಜ, ಬಿಜೆಪಿ ಮುಖಂಡ ಕುತ್ಯಾರ್ ನವೀನ್ ಶೆಟ್ಟಿ ಮೊದಲಾ ದವರು ಉಪಸ್ಥಿತ ರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News