ಜೆಡಿಎಸ್-ಬಿಜೆಪಿ ಒಳಒಪ್ಪಂದ ವಿಷಯ ನನಗೆ ಗೊತ್ತಿಲ್ಲ: ಸಿದ್ದರಾಮಯ್ಯ

Update: 2019-11-05 18:00 GMT

ಕಾಪು, ನ. 5: ಮುಂದಿನ ಉಪಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಯೊಂದಿಗೆ ಒಳಒಪ್ಪಂದ ಮಾಡಿಕೊಳ್ಳುವ ಕುರಿತು ತನಗೇನೂ ಗೊತ್ತಿಲ್ಲ. ದೇವೇಗೌಡರು ಹಾಗೂ ಯಡಿಯೂರಪ್ಪ ಅವರು ಸಿಕ್ಕಿದ್ರೆ ನೀವು ಅವರನ್ನೇ ಕೇಳಿ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬುಧವಾರ ಉಡುಪಿಯಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಡೆಯಲಿರುವ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಂದು ಸಂಜೆ ಕಾಪುವಿಗೆ ಆಗಮಿಸಿದ ಸಿದ್ದರಾಮಯ್ಯ ತನ್ನನ್ನು ಭೇಟಿಯಾದ ಸುದ್ದಿಗಾರರು, ದೇವೇಗೌಡ ಹಾಗೂ ಯಡಿಯೂರಪ್ಪ ಅವರ ನಡುವೆ ಟೆಲಿಫೋನ್‌ನಲ್ಲಿ ಮಾತುಕತೆ ನಡೆದಿರುವ ಕುರಿತು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತಿದ್ದರು. ಸಿದ್ದರಾಮಯ್ಯ ಕಾಪು ಮೂಳೂರಿನ ಸಾಯಿರಾಧಾ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.

‘ಅವರು ಈಗಾಗಲೇ ಒಳಒಪ್ಪಂದ ಮಾಡಿಕೊಂಡಿದ್ದಾರೋ, ಇಲ್ವೊ; ಒಳಒಪ್ಪಂದ ಮಾಡಿಕೊಳ್ಳುತ್ತಾರೋ, ಇಲ್ವೋ ನನಗೆ ಗೊತ್ತಿಲ್ಲ. ಇವರ ಒಳ ಒಪ್ಪಂದದ ಬಗ್ಗೆ ನಾನು ಏನೂ ಹೇಳಿಲ್ಲ ಎಂದ ಸಿದ್ದರಾಮಯ್ಯ, ಇದಕ್ಕೆ ನೀವು ದೇವೇಗೌಡ ಹಾಗೂ ಯಡಿಯೂರಪ್ಪ ಸಿಕ್ಕಿದ್ರೆ ಅವರನ್ನೇ ಕೇಳಿ’ ಎಂದರು.

ಈ ಬಗ್ಗೆ ನಾನೂ ಸಾಕಷ್ಟು ಊಹಾಪೋಹಗಳನ್ನು ಕೇಳುತಿದ್ದೇನೆ. ಇಂಥ ಊಹಾಪೋಹಗಳಿಗೆಲ್ಲಾ ನಾನು ಉತ್ತರಿಸಲ್ಲ. ಈ ಬಗ್ಗೆ ನನಗೆ ಏನೂ ಗೊತ್ತಿಲ್ಲ. ಏನೂ ಗೊತ್ತಿಲ್ದೆ ನಾನು ಏನು ಮಾತನಾಡಲಿ ಎಂದವರು ಸುದ್ದಿಗಾರರನ್ನೇ ಮರು ಪ್ರಶ್ನಿಸಿದರು.

ಮೈತ್ರಿ ಸರಕಾರ ಬೀಳಿಸಿದ್ದು ಸಿದ್ದರಾಮಯ್ಯ ಎಂಬ ದೇವೇಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಮೈತ್ರಿ ಸರಕಾರ ಬೀಳೋಕೆ ಯಾರು ಕಾರಣ ಅನ್ನೋದಿಕ್ಕೆ ಈಗಾಗಲೇ ಸುಧೀರ್ಘ ಉತ್ತರ ಕೊಟ್ಟಿದ್ದೇನೆ. ದೇವೇಗೌಡ್ರು ಆರೋಪ ಮಾಡಿದಷ್ಟೂ ಸಲ ನಾನು ಉತ್ತರ ಕೊಡೋದಿಕ್ಕೆ ಆಗುತ್ತಾ ಎಂದು ಅಸಮಧಾನ ವ್ಯಕ್ತಪಡಿಸಿದರು.

ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದ ಯಡಿಯೂರಪ್ಪ ಅವರ ಆಡಿಯೋ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಯಡಿಯೂರಪ್ಪ ಅವರದೇ ಆಡಿಯೋ ಎಂದು ಒಪ್ಕೊಂಡಿದ್ದಾರೆ. ಅವರು ದಿನಕ್ಕೊಂದು ಹೇಳಿಕೆ ಕೊಟ್ರೆ, ಯಾವುದನ್ನು ನಂಬುವುದು ಎಂದು ಮರು ಪ್ರಶ್ನಿಸಿದರು.

‘ಈ ಪ್ರಕರಣ ಈಗಾಗಲೇ ಸುಪ್ರೀಂ ಕೋರ್ಟಿನ ಮೆಟ್ಟಲೇರಿದೆ. ನಮ್ಮ ಲಾಯರ್ ಇಂದು ವಾದವನ್ನೂ ಮಂಡಿಸಿದ್ದಾರೆ. ಇದರಲ್ಲಿ ಅಮಿತ್ ಶಾ ಕುಮ್ಮಕ್ಕು ಬಹಿರಂಗಗೊಂಡಿದೆ. ಕೇಂದ್ರ ಗೃಹ ಸಚಿವರೇ ಹೀಗೆ ಮಾಡಿದರೆ, ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯುತ್ತಾ’ ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್‌ನ ಶನಿ ಎಂಬ ಜನಾರ್ದನ ಪೂಜಾರಿ ಅವರ ಹೇಳಿಕೆಗೆ ‘ನೋ ರಿಯಾಕ್ಷನ್ ಟು ಮಿಸ್ಟರ್ ಜನಾರ್ದನ್ ಪೂಜಾರಿ’ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News