ನೀರಿನ ದರ ಏರಿಕೆ ಮಾಡದಂತೆ ಇರುವ ಹೊಣೆಗಾರಿಕೆ ಈಗಿನ ಸರಕಾರ, ಸಚಿವರಿಗಿದೆ: ಯು.ಟಿ.ಖಾದರ್
ಮಂಗಳೂರು: ಮನಪಾ ನೀರಿನ ದರ ಏರಿಕೆ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದೆ ಕಾಂಗ್ರೆಸ್ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ, ರಾಜ್ಯ ಸರ್ಕಾರದಂತೆ ಸ್ಥಳೀಯಾಡಳಿತ ವಿಚಾರದಲ್ಲೂ ತಮ್ಮ ಹೊಣೆಗಾರಿಕೆಯನ್ನು ಮರೆತು ಹೇಳಿಕೆ ನೀಡುತ್ತಿದ್ದಾರೆ. ಸರಕಾರದಂತೆ ಶಾಸಕ ಕಾಮತ್ ಕೋಮಾದಲ್ಲಿದ್ದಾರೆ ಎಂದು ಶಾಸಕರಾದ ಯು.ಟಿ.ಖಾದರ್ ಟೀಕಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಮತ್ ಅವರು ಶಾಸಕರಾಗಿದ್ದು, ಸ್ಥಳೀಯಾಡಳಿತ ವಿಚಾರದಲ್ಲಿ ಕನಿಷ್ಟ ಜ್ಞಾನವಾದರೂ ಇರಬೇಕಿತ್ತು. ರಾಜ್ಯದಲ್ಲಿ ನಮ್ಮ ಸರ್ಕಾರ ಇರುವಾಗ ಜನರಿಗೆ ಹೊರೆಯಾಗಬಾರದು ಎಂದು ನೀರಿನ ದರ ಏರಿಕೆ ಆದೇಶ ವನ್ನು ಅನುಷ್ಠಾನ ಮಾಡಲು ಅವಕಾಶ ನೀಡಿರಲಿಲ್ಲ . ಬಿಜೆಪಿ ಸರ್ಕಾರ ಬಂದ ಬಳಿಕ ಅನುಷ್ಠಾನ ಆಗಿದ್ದು ತಮ್ಮ ವೈಫಲ್ಯವನ್ನು ಕಾಮತ್ ಒಪ್ಪಿಕೊಳ್ಳಲಿ, ಇಲ್ಲವೇ ಇವರಿಗೆ ಜನರ ಬಗ್ಗೆ ಕಾಳಜಿ ಇದ್ದಲ್ಲಿ ಮುಂದಿನ ಆಡಳಿತ ಬರುವವರೆಗೆ ತಡೆಯಲಿ. ಸರ್ಕಾರ, ಉಸ್ತುವಾರಿ, ಶಾಸಕರು ಇದ್ದರೂ ಅಂತಜ ಸಾಮರ್ಥ್ಯ ಇಲ್ಲ ಎನ್ನುವ ಕಾರಣಕ್ಕೆ ಇತರರ ಮೇಲೇಕೆ ಗೂಬೆ ಕೂರಿಸಬೇಕು? ನಮಗೆ ಯಾವುದೇ ಮಾಹಿತಿ ಇಲ್ಲದೆ ಅಧಿಕಾರಿಗಳು ಮಾಡಿದ ಯೋಜನೆಯಾಗಿದ್ದರಿಂದ ನಾವು ಜಾರಿಯಾಗಲು ಬಿಟ್ಟಿರಲಿಲ್ಲ. ಜನರ ಬಗ್ಗೆ ಕಾಳಜಿ ಇದ್ದರೆ ಸರಕಾರದ ಮೂಲಕ ನೀರಿನ ದರ ಏರಿಕೆಯ ನಿರ್ಧಾರವನ್ನು ತಡೆ ಹಿಡಿಯಲಿ ಎಂದು ಖಾದರ್ ಸವಾಲೆಸೆದರು.