×
Ad

ಸ್ವಚ್ಛ, ಸುಂದರ, ಸಮೃದ್ಧ ಮಂಗಳೂರಿಗಾಗಿ ಮಗದೊಮ್ಮೆ ಕಾಂಗ್ರೆಸ್‌: ಸಿದ್ದರಾಮಯ್ಯ

Update: 2019-11-06 17:51 IST

ಮಂಗಳೂರು, ನ. 6: ಮಂಗಳೂರು ಮಹಾನಗರ ಪಾಲಿಕೆಗೆ ನ.12ರಂದು ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ  ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಬುಧವಾರ ದ.ಕ. ಜಿಲ್ಲಾ ಕಚೇರಿಯಲ್ಲಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಪಾಲಿಕೆಯ ಅಧಿಕಾರಿಗಳು ಏಕಪಕ್ಷೀಯವಾಗಿ ಹೆಚ್ಚಳ ಮಾಡಿರುವ ನೀರಿನ ದರವನ್ನು ಮರು ಪರಿಶೀಲಿಸಲಾಗುವುದು. ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನುಷ್ಠಾನಗೊಂಡ ಎಡಿಬಿ 2ನೇ ಹಂತದ ಯೋಜನೆಯ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರಿನ ಪೂರೈಕೆಯನ್ನು ಎಲ್ಲಾ ವಾರ್ಡ್‌ಗಳಿಗೂ ವಿಸ್ತರಿಸಲಾಗುವುದು. ತುಂಬೆಯಿಂದ ಮಂಗಳೂರಿಗೆ ಹಾದು ಹೋಗಿರುವ ಪೈಪ್‌ಲೈನ್‌ನಿಂದ ಗ್ರಾಮಾಂತರ ಪ್ರದೇಶದ ಕೆಲವು ಕಡೆಗಳಲ್ಲಿ ಅನಧಿಕೃತವಾಗಿ ಪಡೆದುಕೊಂಡ ನೀರಿನ ಸಂಪರ್ಕಗಳನ್ನು ಕಡಿತಗೊಳಿಸಿ ಅವರಿಗೆ ಪರ್ಯಾಯ ಸಂಪರ್ಕಗಳನ್ನು ಕಲ್ಪಿಸಿ ಮಂಗಳೂರು ನಗರಕ್ಕೆ ನಿರಂತರ ನೀರಿನ ಸರಬರಾಜು ಆಗುವಂತೆ ಕ್ರಮ ಜರುಗಿಸಲಾಗುವುದು. ಕುಡಿಯುವ ನೀರಿಗಾಗಿ ಮಂಗಳೂರು ನಗರ ಪ್ರದೇಶದ ಹೆಚ್ಚಿನ ಜನರು ನೇತ್ರಾವತಿ ನದಿಯನ್ನೇ ಅವಲಂಬಿತರಾಗಿರುವ ಪರಿಸ್ಥಿತಿಯನ್ನು ಅರಿತು ಸಮುದ್ರದ ಉಪ್ಪು ನೀರನ್ನು ಸಂಸ್ಕರಿಸಿ ಪರ್ಯಾಯ ಮೂಲಗಳಿಂದ ನೀರನ್ನು ಪೂರೈಕೆ ಮಾಡುವ ಯೋಜನೆಯು ಕಾರ್ಯ ರೂಪಕ್ಕೆ ತರಲಾಗುವುದು. ನಗರದ ರಾಜಕಾಲುವೆಗಳಲ್ಲಿ ಹರಿಯುವ ತ್ಯಾಜ್ಯವನ್ನು ತಡೆಯಲು ಎಡಿಬಿ 2ನೇ ಯೋಜನೆಯಲ್ಲಿ 90 ಕೋ.ರೂ.ವೆಚ್ಚದಲ್ಲಿ ನಗರದ ಪಾಂಡೇಶ್ವರ-ಕಂಡತ್ತ್‌ಪಲ್ಲಿ-ಕುದ್ರೋಳಿ-ಮುಲ್ಲಕಾಡು ಮತ್ತು ಕಾವೂರುವರೆಗಿನ ಮುಖ್ಯ ಪಂಪಿಂಗ್ ಕೊಳವೆಯನ್ನು ಬದಲಾಯಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಜೆಪ್ಪುಮತ್ತು ಗುಜ್ಜರಕೆರೆಯಲ್ಲೂ ಪಂಪಿಂಗ್ ಕೊಳವೆ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಇದನ್ನು ತೀವ್ರ ಗತಿಯಲ್ಲಿ ಮುಗಿಸಲು ಕ್ರಮ ಜರುಗಿಸಲಾಗುವುದು. ನಗರದ ರಸ್ತೆಗಳ ಹಾಗೂ ಫುಟ್‌ಪಾತ್‌ಗಳ ಅಭಿವೃದ್ಧಿ ನಿಟ್ಟಿನಲ್ಲಿ ನಂತೂರು- ಕದ್ರಿ-ಕಂಕನಾಡಿ ವೃತ್ತದಿಂದ ಕೋಟಿ ಚೆನ್ನಯ್ಯ ವೃತ್ತದವರೆಗಿನ ರಸ್ತೆಯ ಬಾಕಿ ಉಳಿದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸ್ಮಾರ್ಟ್ ರಸ್ತೆಯನ್ನಾಗಿಸಲಾಗುವುದು. ಕೋಟಿ ಚೆನ್ನಯ್ಯ ವೃತ್ತದಿಂದ ಮಹಾಕಾಳಿಪಡ್ಪುಮೂಲಕ ಜೆಪ್ಪಿನಮೊಗರು ತನಕ ರಾಷ್ಟ್ರೀಯ ಹೆದ್ದಾರಿಗೆ ಈ ರಸ್ತೆಯ ಸಂಪರ್ಕ ಕಲ್ಪಿಸಲಾಗುವುದು. ಲಾಲ್‌ಭಾಗ್ ವೃತ್ತದಿಂದ ಲೇಡಿಹಿಲ್ ವೃತ್ತವಾಗಿ ಮತ್ತು ಅಲ್ಲಿಂದ ಸುಲ್ತಾನ್ ಬತ್ತೇರಿಯವರೆಗೆ ಸ್ಮಾರ್ಟ್ ರಸ್ತೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಅದನ್ನು ಶೀಘ್ರದಲ್ಲಿ ಪೂರ್ಣಗೊಳಿಸಲಾಗುವುದು. ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ದೇರೆಬೈಲ್ ಕೊಂಚಾಡಿ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು ಇದನ್ನು ಸ್ಮಾರ್ಟ್ ರಸ್ತೆಯನ್ನಾಗಿ ಪರಿವರ್ತಿಸಲಾಗುವುದು. ಕಣ್ಣೂರು - ಕನ್ನಗುಡ್ಡೆ - ಕುಲಶೇಖರ ರಸ್ತೆಯನ್ನು ಅಭಿವೃದ್ಧಿಗೊಳಿಸಲಾಗುವುದು. ಮಹಾಕಾಳಿಪಡ್ಪುನಲ್ಲಿ ರೈಲ್ವೆ ಕೆಳ ಸೇತುವೆ, ಕೊಡಕಲ್‌ನಿಂದ ಕಣ್ಣಗುಡ್ಡೆಗೆ ಕಣ್ಣೂರು ಬಳಿಯಲ್ಲಿ ರೈಲ್ವೆ ಅಂಡರ್‌ಪಾಸ್, ಕದ್ರಿ ಕೆಪಿಟಿ ಬಳಿಯಲ್ಲಿ ಅಂಡರ್‌ಪಾಸ್, ರೈಲ್ವೆ ಸ್ಟೇಷನ್‌ನಿಂದ ಟೌನ್‌ಹಾಲ್ ಕಡೆಗೆ, ಶ್ರೀನಿವಾಸ್ ಮಲ್ಯ ರಸ್ತೆಗೆ ಅಂಡರ್‌ಪಾಸ್, ಪಾಂಡೇಶ್ವರ ರೈಲ್ವೆ ಲೆವೆಲ್ ಕ್ರಾಸಿನಲ್ಲಿ ಮೇಲ್ಸೆತುವೆ ಮತ್ತು ಕೆಳಸೇತುವೆ ನಿರ್ಮಿಸಲಾಗುವುದು.

ನಗರದ ಹೊರವಲಯದಲ್ಲಿ ಬಸ್ ಬೇಗಳನ್ನು ನಿರ್ಮಾಣ ಮಾಡಲಾಗಿದ್ದು, ಉಳಿದ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಬಸ್ ಬೇ ನಿರ್ಮಾಣ ಮಾಡಲಾಗುವುದು. ನಗರದಲ್ಲಿ ತಲೆದೋರಿರುವ ವಾಹನಗಳ ನಿಲುಗಡೆಯ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಲಭ್ಯವಿರುವ ಖಾಲಿ ಜಾಗಗಳಿಗೆ ಇಂಟರ್‌ಲಾಕ್ ಅಳವಡಿಸಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗುವುದು. ಹಳೆ ಬಸ್‌ಸ್ಟಾಂಡ್ ಪ್ರದೇಶದಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಪಾರ್ಕಿಂಗ್ ವ್ಯವಸ್ಥೆಗಳನ್ನು ಮೂಲಭೂತ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗುವುದು. ಮಾರ್ನಮಿಕಟ್ಟೆ, ಬೋಳಾರ, ಪಣಂಬೂರು, ಕೂಳೂರು, ಮೋರ್ಗನ್ಸ್‌ಗೇಟ್, ಗಣೇಶಪುರ, ಕೈಕಂಬ, ಕಾಟಿಪಳ್ಳ, ಕೃಷ್ಣಾಪುರ, ವಾಮಂಜೂರು ಜಂಕ್ಷನ್‌ಗಳನ್ನು ಆದ್ಯತೆಯ ಮೇರೆಗೆ ಅಭಿವೃದ್ಧಿಗೊಳಿಸಲಾಗುವುದು.

ಪಂಪ್‌ವೆಲ್‌ನಲ್ಲಿ ಸರ್ವಿಸ್ ಬಸ್‌ಸ್ಟಾಂಡ್ ಹಾಗೂ ಸಿಟಿ ಬಸ್ ಟರ್ಮಿನಲ್, ಮಲ್ಲಿಕಟ್ಟೆಯಲ್ಲಿ ಸಿಟಿ ಬಸ್ ಟರ್ಮಿನಲ್, ಸುರತ್ಕಲ್ ಬಸ್ ನಿಲ್ದಾಣವನ್ನು ಅಭಿವೃದ್ಧಿ, ಸ್ಟೇಟ್‌ಬ್ಯಾಂಕ್‌ನ ಹತ್ತಿರ ಸುಸಜ್ಜಿತ ಸಿಟಿ ಬಸ್ ನಿಲ್ದಾಣ ನಿರ್ಮಿಸಲಾಗುವುದು. ಮನೆ ಮನೆಗಳಿಂದ ಘನ ತ್ಯಾಜ್ಯ ಸಂಗ್ರಹಣೆ ಮಾಡುವ ಕಾರ್ಯವು ಇದೀಗ ಸಮರ್ಪಕವಾಗಿ ನಡೆಯುತ್ತಿದೆ.ಇದನ್ನು ಇನ್ನಷ್ಟು ಸುಧಾರಣೆಗೊಳಿಸಿ ಕಸ ವಿಂಗಡಣೆಯ ಕಾರ್ಯವನ್ನು ಸುಗಮಗೊಳಿಸಲಾಗುವುದು. ಪಚ್ಚನಾಡಿಯ ಡಂಪಿಂಗ್ ಯಾರ್ಡ್ ಪರಿಸರದಲ್ಲಿ ಸಂಗ್ರಹಣೆಯಾಗಿರುವ ಕಸದಿಂದಾಗಿ ಸ್ಥಳೀಯ ನಿವಾಸಿಗರಿಗೆ ಬಹಳಷ್ಟು ತೊಂದರೆಯಾಗಿದ್ದು, ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಕಸದಿಂದ ವಿದ್ಯುತ್ ಉತ್ಪಾದನೆ ಅಥವಾ ಇನ್ನಿತರ ಸುಧಾರಿತ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗುವುದು. ನಗರದ ಕಂಕನಾಡಿ, ಬಂದರು, ಉರ್ವ, ಶಕ್ತಿನಗರ, ಮಲ್ಲಿಕಟ್ಟೆ, ಪಡೀಲು, ಕುಂಜತ್ತ್‌ಬೈಲ್, ಕೂಳೂರು ಮತ್ತಿತರ ಕಡೆ ನಗರ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗುವುದು. ಹೆಣ್ಣು ಮಕ್ಕಳಿಗೆ ನ್ಯಾಪ್ಕಿನ್ ಪ್ಯಾಡ್‌ಗಳನ್ನು ಉಚಿತವಾಗಿ ನೀಡಲಾಗುವುದು.

ಬೀದಿ ನಾಯಿಗಳ ಸಂತಾನ ನಿಯಂತ್ರಣ ಮಾಡಲು ಆದ್ಯತೆ ನೀಡಲಾಗುವುದು.ಕಾಟಿಪಳ್ಳ, ಉರ್ವಸ್ಟೋರ್, ಕೇಂದ್ರ ಮಾರುಕಟ್ಟೆ, ಬಿಕರ್ನಕಟ್ಟೆ ಕೈಕಂಬ ಬಳಿಯ ಸಂತೆ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲಾಗುವುದು. ಜೆಪ್ಪಿನಮೊಗರುವಿನಲ್ಲಿ ನೇತ್ರಾವತಿ ನದಿಯ ಸೇತುವೆ ಬಳಿಯಿಂದ ಕಣ್ಣೂರಿನವರೆಗೆ ನದಿ ತೀರದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ತಣ್ಣೀರುಬಾವಿ, ಪಣಂಬೂರು, ಸಸಿಹಿತ್ಲು ಮುಂತಾದ ಸಮುದ್ರ ತೀರ ಪ್ರದೇಶಗಳ ಅಭಿವೃದ್ಧಿಯನ್ನು ಆದ್ಯತೆ ಮೇರೆಗೆ ಕೈಕೊಳ್ಳಲಾಗುವುದು. ಹಳೆ ಬಂದರು ಮತ್ತು ಮೀನುಗಾರಿಕಾ ಬಂದರಿನ ಕಡೆಗೆ ಹೋಗುವ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ, ಮೀನುಗಾರಿಕಾ ದೋಣಿಗಳನ್ನು ನಿಲುಗಡೆ ಮಾಡಲು ಬೆಂಗ್ರೆಯಲ್ಲಿ ಮೀನುಗಾರಿಕಾ ದಕ್ಕೆ ಅಭಿವೃದ್ಧಿಗೊಳಿಸಲಾಗುವುದು. ಬೆಂಗ್ರೆಯಲ್ಲಿ ಲಕ್ಷದ್ವೀಪದ ಸರಕು ಸಾಗಾಣಿಕೆಗೆ ಬಂದರು ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಆನ್‌ಲೈನ್ ಮೂಲಕ ನೀರಿನ ಬಿಲ್ಲುಗಳ ಪಾವತಿ ಮತ್ತು ಅದಕ್ಕೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುವ ವ್ಯವಸ್ಥೆ ಕಲ್ಪಿಸಲಾಗುವುದು. ಮನೆ ತೆರಿಗೆ ಪಾವತಿ ಹಾಗೂ ಖಾತೆಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸ್ವೀಕಾರವಾಗುವಂತೆ ಮಾಡಲಾಗುವುದು. ಕಟ್ಟಡ ನಿರ್ಮಾಣ ಪರವಾನಿಗೆ ಅರ್ಜಿ ಮತ್ತು ಪ್ರವೇಶ ಪತ್ರ ಅರ್ಜಿಗಳ ಸಲ್ಲಿಸುವಿಕೆಯನ್ನು ಆನ್‌ಲೈನ್ ಮಾಡಲಾಗುವುದು. ಉದ್ಯಮ ಪರವಾನಿಗೆ ಹಾಗೂ ಎಲ್ಲಾ ತರದ ಪರವಾನಿಗೆಗಳ ವ್ಯವಹಾರವನ್ನು ಆನ್‌ಲೈನ್ ಮೂಲಕ ಮಾಡಲಾಗುವುದು. ಸುರತ್ಕಲ್‌ನಲ್ಲಿ ವಿಭಾಗೀಯ ಕಚೇರಿಯನ್ನು ಮೇಲ್ದರ್ಜೆಗೆ ಏರಿಸಿ ಪೂರ್ಣ ಪ್ರಮಾಣದ ಆಡಳಿತ ಕಚೇರಿಯನ್ನಾಗಿ ಪರಿವರ್ತಿಸಲಾಗುವುದು

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News